ಸುಮಧ್ವ ವಿಜಯ ಸರ್ಗ 2

ಸುಮಧ್ವ ವಿಜಯ ಸರ್ಗ 2
ವಿಜ್ಞಾನ ಭಾನುಮತಿ ಕಾಲಬಲೇನ ಲೀನೇ
ದುರ್ಭಾಷ್ಯ ಸಂತಮ ಸಂತತಿತೋ ಜನೇsoಧೇ |
ಮಾರ್ಗಾತ್ ಸತಾಂ ಸ್ಖಲತಿ ಖಿನ್ನಹೃದೋ ಮುಕುಂದಂ
ದೇವಾಶ್ಚತುರ್ಮುಖಮುಖಾ: ಶರಣಂ ಪ್ರಜಗ್ಮು: || ೧ ||

ವಿಜ್ಞಾನ ಭಾನುಮತಿ ಕಾಲಬಲೇನ ಲೀನೇ ದುರ್ಭಾಷ್ಯ ಸಂತಮಸ ಸಂತತಿತ: ಜನೇ ಅಂಧೇ ಮಾರ್ಗಾತ್ ಸತಾಂ ಸ್ಖಲತಿ ಖಿನ್ನಹೃದ: ಮುಕುಂದಂ ದೇವಾ: ಚತುರ್ಮುಖ ಮುಖಾ: ಶರಣಂ ಪ್ರಜಗ್ಮು: ||

ವಿಜ್ಞಾನ – ತತ್ವಜ್ಞಾನವೆಂಬ ಭಾನುಮತಿ: – ಸೂರ್ಯನು ಕಾಲ ಬಲೇನ – ಕಲಿಯುಗ ಪ್ರಭಾವದಿಂದ ಲೀನೇ ಸತಿ – ಮರೆಯಾಗಲು ಜನೇ – ಜನರು ದುರ್ಭಾಷ್ಯ – ಕೆಟ್ಟ ಭಾಷ್ಯದಿಂದ ಸಂತಮಸ:– ಅಂಧಕಾರದ ಸಂತತಿತ: – ಪರಂಪರೆಯಿಂದ ಅಂಧೇ ಸತಿ – ಕುರುಡಾಗಿರಲು ಸತಾಂ – ಸಜ್ಜನರು ಮಾರ್ಗಾತ್ – ಮಾರ್ಗದಿಂದ ಸ್ಖಲತಿ ಸತಿ – ಜಾರುತ್ತಿರಲು ಚತುರ್ಮುಖ ಬ್ರಹ್ಮ ದೇವರೇ ಮುಖಾ: ದೇವಾ: – ಮೊದಲಾದ ದೇವತೆಗಳು ಖಿನ್ನಹೃದ: – ಖೇದವಾದ ಹೃದಯದಿಂದ ಮುಕುಂದಂ – ಪರಮಾತ್ಮನ ಶರಣಂ ಪ್ರಜಗ್ಮು: – ಶರಣಾದರು.

ನಾಥ: ಕಲೌ ತ್ರಿಯುಗಹೂತಿ: ಅನುದ್ಬುಭೂಷು:

ಬ್ರಹ್ಮಾಣಂ ಅಪಿ ಅನವತಾರಂ ಅನಾದಿದಿಕ್ಷು: !
ಸರ್ವಜ್ಞಂ ಅನ್ಯಂ ಅನವೇಕ್ಷ್ಯ ಸಕಾರ್ಯವೀರ್ಯಂ

ಸ್ಮೇರಾನನ: ಭುವನಜೀವನಂ ಆಬಭಾಷೇ ! 2 !

ನಾಥ: – ಒಡೆಯನಾದ ತ್ರಿಯುಗಹೂತಿ: ತ್ರಿಯುಗ ಎಂಬ ಹೆಸರುಳ್ಳ ಶ್ರೀಹರಿಯು
ಕಲೌ – ಕಲಿಯುಗದಿ ಅನುದ್ಬುಭೂಷು: ಅವತಾರ ಮಾಡಲು ಅಪೇಕ್ಷೆ ಇಲ್ಲದ ಮತ್ತು ಅನವತಾರಂ ಅವತಾರ ಇಲ್ಲದಿರುವ ಬ್ರಹ್ಮಾಣಂ ಅಪಿ ಬ್ರಹ್ಮನಿಗೆ ಕೂಡ, ಅನಾದಿದಿಕ್ಷು: – ಆಜ್ಞೆ ಮಾಡಲು ಇಚ್ಛೆಯಿಲ್ಲದೆ ಸಕಾರ್ಯವೀರ್ಯಂ – ಕಾರ್ಯ ಸಾಧಿಸುವ ಸಾಮರ್ಥ್ಯದ ಸರ್ವಜ್ಞಂ – ಸರ್ವಜ್ಞರಾದ ಭುವನ ಜೀವನಂ – ಲೋಕಕ್ಕೆ ಜೀವನ ಕೊಡುವ ವಾಯುವನ್ನು ಸ್ಮೇರಾನನ: – ಮುಗುಳ್ನಗೆಯಿಂದ ಆಬಭಾಷೇ – ಮಾತನಾಡಿದನು.

ಕಲಿಯುಗದಲ್ಲಿ ಅವತಾರ ಮಾಡದ (ಉಳಿದ ಮೂರು ಯುಗಗಳಲ್ಲಿ ಮಾತ್ರ ಅವತಾರ ಮಾಡುವುದರಿಂದ ತ್ರಿಯುಗ) ಶ್ರೀಹರಿಯು ಅವತಾರವೇ ಇಲ್ಲದ ಬ್ರಹ್ಮನಿಗೆ ಆದೇಶಿಸದೆ ಸಕಲಲೋಕಕ್ಕೆ ಜೀವಪ್ರದ ವಾಯುದೇವರನ್ನು ಆಜ್ಞಾಪಿಸಿದನು.

ವೇದಾಂತಮಾರ್ಗ ಪರಿಮಾರ್ಗಣ ದೀನದೂನಾ
ದೈವೀ: ಪ್ರಜಾ ವಿಶರಣಾ ಕರುಣಾ ಪದಂ ನ: !
ಆನಂದಯೇ: ಸುಮುಖ ಭೂಷಿತ ಭೂಮಿ ಭಾಗೋ

ರೂಪಾಂತರೇಣ ಮಮ ಸದ್ಗುಣನಿರ್ಣಯೇನ !! ೩ !!

ಹೇ ಸುಮುಖ – ಸುಮುಖನಾದ ವಾಯುವೇ, ವೇದಾಂತಮಾರ್ಗ – ಬ್ರಹ್ಮಸೂತ್ರದ ಮಾರ್ಗವನ್ನು ಪರಿಮಾರ್ಗಣ – ಹುಡುಕುತ್ತ ದೀನ ದೂನಾ: – ದೀನತೆಯಿಂದ ಬಳಲಿ ದೈವೀ: – ದೇವತೆಗಳ ವಿಶರಣಾ: – ಕರುಣೆಯಿಲ್ಲದ ಪ್ರಜಾ:– ಜನರು ನ: – ನಮ್ಮ ಕರುಣಾ ಪದಂ – ಕೃಪೆಯನ್ನು ರೂಪಾಂತರೇಣ – ಬೇರೆ ರೂಪದಿಂದ ಭೂಷಿತ: ಅಲಂಕೃತ ಭೂಮಿಭಾಗ: – ಭೂಮಿಯನ್ನು ಮಮ – ನನ್ನ ಸದ್ಗುಣ – ಸದ್ಗುಣಗಳ ನಿರ್ಣಯೇನ – ನಿರ್ಣಯ ಮಾಡಿ ಆನಂದಯೇ – ನನಗೆ ಸಂತೋಸಗೊಳಿಸು.

ಪರಮಾತ್ಮನು ವಾಯುದೇವರಿಗೆ ಆದೇಶಿಸುತ್ತಾನೆ – “ಭೂಲೋಕದಲ್ಲಿ ಅವತರಿಸಿ, ಶ್ರೀಹರಿಯ ಸದ್ಗುಣಗಳ ನಿರ್ಣಯ ಮಾಡಿ ಭಕ್ತರನ್ನು ಉದ್ದಾರ ಮಾಡು”

ಆದೇಶಮೌಲಿಮಣಿಮುಜ್ವಲವರ್ಣಮೇನಂ
ಬದ್ದಾಂಜಲಿಮರುದನರ್ಘಮಧತ್ತಮೂರ್ದ್ನಾ !
ಹಾರಾವಲಿಮಿವಹೃದಾ ವಿಭುದೇಂದ್ರ ಯಾಚ್ಜ್ಞಾ ಬಿಭ್ರನ್ ನಿಜಾನನುಜಿಘೃಕ್ಷುರವಾತಿತೀರ್ಷತ್ ! ೪ !

ಮರುತ್ – ವಾಯುದೇವರು, ಬದ್ಧ ಅಂಜಲಿ ಸನ್ – ಕೈಮುಗಿದವರಾಗಿ ಅನರ್ಘ್ಯಂ – ಅನರ್ಘ್ಯವಾದ ಏನಂ ಆದೇಶ – ಈ ಆದೇಶವೆಂಬ ಮೌಲಿಮಣಿಂ – ಶಿರದಲ್ಲಿ ಧರಿಸುವ ಮಣಿಯನ್ನು, ಉಜ್ವಲವರ್ಣಂ – ಪ್ರಕಾಶಮಾನವಾದ ಬಣ್ಣವನ್ನು, ವರ್ಣವನ್ನು ಮೂರ್ದ್ನಾ – ಶಿರಸಾ ಅಧತ್ತ – ಧರಿಸಿದರು. ವಿಭುದೇಂದ್ರ – ದೇವಾದಿ ಶ್ರೇಷ್ಟರ ಯಾಂಚಾಂ – ಕೋರಿಕೆಯನ್ನು ಹೃದಾ – ಹೃದಯದಲ್ಲಿ ಹಾರಾವಲಿಮಿವ – ಹಾರಗಳ ಸಮೂಹದಂತೆ ಬಿಭ್ರತ್ – ಧರಿಸಿದರು. ನಿಜಾನ್ – ತನ್ನ ಭಕ್ತರ ಅನುಜಿಘೃಕ್ಷು: – ಅನುಗ್ರಹ ಮಾಡುವ ಅಪೇಕ್ಷೆಯಂತೆ ಅವಾತಿತೀರ್ಷತ್ – ಅವತರಿಸಲು ಇಚ್ಛಿಸಿದರು

ವಾಯುದೇವರು ದೇವತೆಗಳ ಕೋರಿಕೆಯಂತೆ ಪರಮಾತ್ಮನ ಆದೇಶವನ್ನು ಶಿರಸಾಧರಿಸಿ ಹರಿಭಕ್ತರನ್ನು ತತ್ವಜ್ಞಾನದ ಉಪದೇಶ ದ್ವಾರ ಮುಕ್ತಿಯೋಗ್ಯರಾಗಿ ಮಾಡಲು ಅವತರಿಸಲು ಇಚ್ಛಿಸಿದರು.

ಕಾಲ:ಸ ಏವ ಸಮವರ್ತತ ನಾಮ ಯಾವ-
ಚ್ಚಿಂತಾಕುಲಂ ವಿವಿಧಸಾಧುಕುಲಂ ಬಭೂವ |
ವೇದಾಂತ ಸಂತತಕೃತಾಂತರಸಂ ನ ವಿಧ್ಮ:

ಶ್ರೇಯೋ ಲಭೇಮಹಿ ಕಥಂ ನು ವಯಂ ಬತೇತಿ || ೫ ||

ಯಾವತ್ ಏವ – ಯಾವಾಗ ಸ: ಕಾಲ: – ಬ್ರಹ್ಮಾದಿ ದೇವತೆಗಳು ಪ್ರಾರ್ಥಿಸಿದ ಸಮಯ ; ಸಮವರ್ತತ ನಾಮ – ಮತ್ತೆ ಉಂಟಾದಾಗ ; ವಿವಿಧ ಸಾಧು ಕುಲಂ – ವಿವಿಧ ಸಜ್ಜನರ ಸಮೂಹವು ವೇದಾಂತ – ಬ್ರಹ್ಮ ಮೀಮಾಂಸ ಶಾಸ್ತ್ರದ ಸಂತತ – ಒಳ್ಳೆ ಸಂಪ್ರದಾಯದ ಕೃತಾಂತ – ಬಂದಂತ ಸಿದ್ದಾಂತದ ರಸಂ – ಸಾರವನ್ನು; ವಯಂ ನ ವಿದ್ಮ: – ತಿಳಿಯುವುದಿಲ್ಲ. ಶ್ರೇಯ: – ಶ್ರೇಯಸ್ಸನ್ನು ಕಥಂ ನು – ಹೇಗೆ ಲಭೇಮಹಿ – ಹೊಂದುವೆವು. ಬತ – ಕಷ್ಟ ಇತಿ – ಹೀಗೆಂದು ಚಿಂತಾಕುಲಂ ಬಭೂವ – ಚಿಂತೆಗೊಳಗಾದರು.

ಬ್ರಹ್ಮಾದಿ ದೇವತಾ ಸಮೂಹವು ಪರಮಾತ್ಮನ ಪ್ರಾರ್ಥಿಸಿದ ಸಮಯದಲ್ಲಿ ಸಜ್ಜನರು “ನಮಗೆ ವೇದಾಂತ ರಹಸ್ಯವ ತಿಳಿಯದೆ ಹೇಗೆ ಶ್ರೇಯಸ್ಸು” ಎಂದು ಚಿಂತಿತರಾದರು.

ತತ್ಪ್ರೀತಯೇ ರಜತಪೀಠಪುರಾಧಿವಾಸೀ ದೇವೋ
ವಿವೇಶ ಪುರುಷಂ ಶುಭಸೂಚನಾಯ |
ಪ್ರಾಪ್ತೇ ಮಹಾಯ ಮಹಿತಾಯ ಮಹಾಜನೌಘೇ
ಕೋಲಾಹಲೇನ ಸಕುತೂಹಲಿನಿ ಪ್ರವೃತ್ತೇ |೬|

ತತ್ಪ್ರೀತಯೇ – ಚಿಂತಿತರಾದ ಸಜ್ಜನರ ಪ್ರೀತಿಗಾಗಿ ಶುಭಸೂಚನಾಯ – ಮುಂದೆ ಸಜ್ಜನರಿಗೆ ಆಗಲಿರುವ ಶುಭವನ್ನು ಸೂಚಿಸಲು (ವಾಯುದೇವರ ಅವತಾರ ವಿಷಯ) ಪುರುಷಂ – ಒಬ್ಬ ಪುರುಷನನ್ನು ಮಹಿತಾಯ ಮಹಾಯ – ಶ್ರೇಷ್ಟವಾದ ಮಕರ ಸಂಕ್ರಾಂತಿ ಉತ್ಸವಕ್ಕಾಗಿ ಕೋಲಾಹಲೇನ – ಸಂಭ್ರಮದಿಂದ ಪ್ರಾಪ್ತೇ – ಬಂದಂತಹ ಸಕುತೂಹಲಿನಿ – ಕುತೂಹಲವುಳ್ಳ ; ಮಹಾಜನೌಘೇ – ಮಹಾ ಜನರ ಗುಂಪು ಪ್ರವೃತ್ತೇ – ಇರಲು ; ರಜತಪೀಠಪುರ – ರಜತಪೀಠಪುರದ (ಉಡುಪಿಯಲ್ಲಿ) ಅಧಿವಾಸೀ – ವಾಸಿಸುವ ದೇವ: – ಅನಂತಾಸನನು ; ವಿವೇಶ – ಹೊಕ್ಕನು.

ಆ ಸಮಯದಲ್ಲಿ ಒಮ್ಮೆ ಉಡುಪಿಯಲ್ಲಿ ಮಕರ ಸಂಕ್ರಾಂತಿ ಉತ್ಸವ ಸಮಯದಲ್ಲಿ ಭಾರೀ ಜನ ಸಮೂಹವಿರುವಾಗ ಚಿಂತಿತ ಸಜ್ಜನರನ್ನು ಸಂತೋಷಗೊಳಿಸಲು ತಿಳಿಸಲು ಅನಂತಾಸನನು ಒಬ್ಬ ಮನುಷ್ಯನಲ್ಲಿ ಆವೇಶಗೊಂಡನು

ಆಭಾಷ್ಯ ಸೋsತ್ರ ಜನತಾಂ ಶಪಥಾನುವಿದ್ದ-
ಮುಚ್ಚೈರಿದಂ ವಚನಮುದ್ಧೃತದೋರ್ಬಭಾಷೇ |
ಉತ್ಪತ್ಸ್ಯತೇ ಜಗತಿ ವಿಶ್ವಜನೀನವೃತ್ತಿ-
ರ್ವಿಶ್ವಜ್ಞ ಏವ ಭಗವಾನಚಿರಾದಿಹೇತಿ | ೮ |

ಸ: – ಅನಂತಾಸನನು ಅತ್ರ – ಉಡುಪಿಯಲ್ಲಿ ಜನತಾಂ ಜನತೆಯನ್ನು ಆಭಾಷ್ಯ – ಕರೆದು ಉದ್ಧೃತದೋ: ಸನ್ – ಎರಡೂ ತೋಳನ್ನು ಎತ್ತಿದವನಾಗಿ ಶಪಥಾನುವಿದ್ದಂ – ಶಪಥಸಹಿತವಾಗಿ ಉಚ್ಚೆ: – ಘಟ್ಟಿಯಾದ ದ್ವನಿಯಲ್ಲಿ ಇಹ ಜನನೀ – ಈ ಜಗತ್ತಿನಲ್ಲಿ ವಿಶ್ವಜನೀನ ವೃತ್ತಿ: – ಸಮಸ್ತ ಜನರ ವ್ಯಾಪಾರವುಳ್ಳ ಸರ್ವಜ್ಞ:– ಸರ್ವಜ್ಞರಾದ ಭಗವಾನ್ – ಷಡ್ಗುಣೈಶ್ವರ್ಯ ಸಂಪನ್ನರಾದವರು ಅಚಿರಾದೇವ – ಶೀಘ್ರದಲ್ಲೇ ಉತ್ಪತ್ಸ್ಯತೇ – ಹುಟ್ಟುವರು ಇತಿ – ಹೀಗೆ ವಚನಂ – ಮಾತನ್ನು ಆಬಭಾಷೇ – ಹೇಳಿದರು.

ಅನಂತಾಸನನು ಎಂತಹವರು ಅವತಾರ ಮಾಡುತ್ತಾರೆ ಎಂದಿದ್ದಾರೆ –
“ಅವರು ಸರ್ವಜ್ಞರೂ, ಷಡ್ಗುಣೈಶ್ವರ್ಯ ಸಂಪನ್ನರೂ, ಸಜ್ಜನರಿಗೆ ಹಿತವನ್ನು ತರುವವರೂ ಆಗಿರುತ್ತಾರೆ”

ಸದ್ವೀಪವಾರಿನಿಧಿಸಪ್ತಕಭೂತಧಾತ್ರ್ಯಾ
ಮಧ್ಯೇsಪಿ ಕರ್ಮಭುವಿ ಭಾರತನಾಮ ಖಂಡೇ |
ಕಾಲೇ ಕಲೌ ಸುವಿಮಲಾನ್ವಯಲಬ್ಧಜನ್ಮಾ
ಸನ್ಮಧ್ಯಗೇಹಕುಲಮೌಲಿಮಣಿರ್ದ್ವಿಜೋ ಭೂತ್ | 9 |

ದ್ವೀಪ ವಾರಿನಿಧಿ – ದ್ವೀಪಗಳು, ಸಮುದ್ರಗಳು, ಇವುಗಳ ಸಸಪ್ತಕ – ಏಳರಿಂದ ಕೂಡಿದ ಭೂತ – ಪ್ರಾಣಿಗಳನ್ನು ಧಾತ್ರ್ಯಾ – ಧಾರಣೆ ಮಾಡಿದ ಭೂಮಿಯ ಮಧ್ಯೇ – ಮಧ್ಯದಲ್ಲಿ ಕರ್ಮಭುವಿ – ಕರ್ಮಭೂಮಿ ಭಾರತನಾಮ ಖಂಡೇ ಭರತ ಖಂಡದಲ್ಲಿ ಕಲೌ ಕಾಲೇ ಅಪಿ – ಕಲಿಗಾಲದಲ್ಲಿಯೂ ಸು ಶ್ರೇಷ್ಟ ವಿಮಲ – ನಿರ್ಮಲವಾದ ಅನ್ವಯ ಲಬ್ಧ ಜನ್ಮ- ವಂಶದಲ್ಲಿ ಹುಟ್ಟಿದ ಸತ್ – ಸಜ್ಜನರಾದ ಮಧ್ಯಗೇಹ ಮಧ್ಯಗೇಹ ಎಂಬ ಕುಲ – ವಂಶಕ್ಕೆ ಮೌಲಿಮಣಿ: ಶಿರೋರತ್ನ ದ್ವಿಜ: ಬ್ರಾಹ್ಮಣರು ಅಭೂತ್ – ಇದ್ದರು.

ಪ್ರಸ್ತುತ ಮಧ್ಯಗೇಹ ಭಟ್ಟರು ಅಥವಾ ನಡುಮನೆ ಭಟ್ಟರು ಇದು ಅವರ ಹೆಸರಲ್ಲ. ಅವರು ಇದ್ದ ಮನೆಯಿಂದ ಬಂದ ಹೆಸರು. ಆದ್ದರಿಂದಲೇ ಅವರನ್ನು “ಮಧ್ಯಗೇಹಭಟ್ಟರು” ಎನ್ನುತ್ತಿದ್ದರು. ಜಂಭೂದ್ವೀಪಾದಿ ಸಪ್ತದ್ವೀಪಗಳ ಮಧ್ಯೆ ನವಖಂಡಗಳಲ್ಲಿ ಒಂದಾದ ಭರತಖಂಡದಲ್ಲಿ ಕರ್ಮಭೂಮಿ ಭಾರತ ದೇಶದಲ್ಲಿ ಇದ್ದರು.

ವೇದಾದ್ರಿಸದ್ರಜತಪೀಠಪುರೇಶ್ವರಾಭ್ಯಾಂ
ಗ್ರಾಮೋ ವಿಭೂಷಿತತರ: ಶಿವರೂಪನಾಮ್ನಾ |
ಹೇಮಾದ್ರಿರಾಜ ವಿಭುರಾಜದಿಲಾವೃತಾಭ-
ಸ್ತಸ್ಯಾಭವದ್ಗುರುಗುಣ: ಖಲು ಮೂಲಭೂಮಿ: | 10 |

ಹೇಮಾದ್ರಿರಾಜ – ಪರ್ವತಶ್ರೇಷ್ಟ ಮೇರು ಪರ್ವತ ವಿಭು – ಮಹದೇವರಿಂದ ರಾಜತ್ – ವಿರಾಜಮಾನವಾದ ಇಲಾವೃತಾಭ: – ಇಲಾವೃತಖಂಡದಂತೆ ಕಾಂತಿಯುತ ವೇದಾದ್ರಿ – ವೇದಪರ್ವತ ಸತ್ – ನಿರ್ದುಷ್ಠವಾದ ರಜತಪೀಠಪುರ – ಉಡುಪಿ ಪಟ್ಟಣಕ್ಕೆ ಈಶ್ವರಾಭ್ಯಾಂ – ಈಶ್ವರನಾದ ಅನಂತೇಶ್ವರ ದೇವರಿಂದ ವಿಭೂಷಿತತರ: – ಅಲಂಕೃತ ಶಿವರೂಪ್ಯ ನಾಮ – ಶಿವಳ್ಳಿ ಎಂಬ ಹೆಸರಿನ ಗ್ರಾಮ – ಗ್ರಾಮವು ಗುರುಗುಣಸ್ಯ – ಶ್ರೇಷ್ಠ ಗುಣವುಳ್ಳ ತಸ್ಯ – ಅವರಿಗೆ ಮೂಲಭೂಮಿ: ಅಭವತ್ – ಜನ್ಮಭೂಮಿಯಾಯಿತು.

ಇಲಾವೃತಖಂಡದಲ್ಲಿ ವಾಸವಾಗಿರುವ ವಿಭು ಎಂಬ ರುದ್ರದೇವರಿಂದ ಶೋಭಿತವಾಗಿದೆ. ಅದೇ ರೀತಿ ಶಿವಳ್ಳಿಯು ವಿಭುಶಬ್ದ ವಾಚ್ಯ (ವಿಭು – ಸಮರ್ಥ) ಅನಂತೇಶ್ವರನಿಂದ ಶೋಭಿತವಾಗಿದೆ.

ರಾಮಾಧಿವೇಶಿತ ಹರಿಸ್ವಸೃ ಮೌಲಿಮಾಲಾ
ರಾಜಾದ್ ವಿಮಾನಗಿರಿಶೋಭಿತಮಧ್ಯುವಾಸ|
ಕ್ಷೇತ್ರಂ ಸ ಪಾಜಕಪದಂ ತ್ರಿಕುಲೈಕಕೇತು:
ಕಂ ಯದ್ ದಧಾತಿ ಸತತಂ ಖಲು ವಿಶ್ವಪಾಜಾತ್ | 11 |

ತ್ರಿಕುಲ – ಮೂರು ಕುಲಗಳಿಗೆ ಏಕಕೇತು: ಧ್ವಜಪ್ರಾಯರಾದ ಸ: ಆ ಮಧ್ಯಗೇಹ ಭಟ್ಟರು ಯತ್ – ಯಾವುದು ವಿಶ್ವ – ವಿಶ್ವವನ್ನು ರಕ್ಷಿಸುವ ಅಜಾತ್ – ಅಜಾತರಾದ ಅಂದರೆ ಉತ್ಪತ್ತಿರಹಿತರಾದ ಪರಶುರಾಮರ ದೆಸೆಯಿಂದ ಸತತಂ – ಯಾವಾಗಲೂ ಕಂ – ನೀರನ್ನು ದಧತಿ – ಧರಿಸಿದೆ. ಅಂತಹ ರಾಮ ಅಧಿವೇಶಿತ – ಪರಶುರಾಮರಿಂದ ಸ್ಥಾಪಿತ ಹರಿ – ಕೃಷ್ಣನ ಸ್ವಸೃ ತಂಗಿಯಾದ ದುರ್ಗೆಯ ಮೌಲಿ ಹಾರ – ಶಿರಸ್ಸಿನ ಹಾರದಿಂದ ರಾಜತ್ – ಪ್ರಕಾಶಮಾನವಾದ ವಿಮಾನಗಿರಿ: – ವಿಮಾನಗಿರಿಯಿಂದ ಶೋಭಿತಂ – ಶೋಭಿತವಾದ ಪಾಜಕಪದಂ – ಪಾಜಕ ಎಂಬ ಹೆಸರಿನ ಕ್ಷೇತ್ರಂ – ಕ್ಷೇತ್ರದಲ್ಲಿ ಅಧ್ಯುವಾಸ – ವಾಸಿಸಿದರು. ಅಲ್ಲಿ ಕೃಷ್ಣನ ತಂಗಿಯಾಗಿ ಬಂದಿದ್ದ ದುರ್ಗಾದೇವಿಯನ್ನು ಪರಶುರಾಮರು ಪ್ರತಿಷ್ಠಾಪಿಸಿದರು.

ಪಾಜಕ – ಪ್ರಪಂಚವನ್ನು ರಕ್ಷಿಸುವುದರಿಂದ ವಿಶ್ವಪ ; ಜನ್ಮರಹಿತನಾದ್ದರಿಂದ ವಿಶ್ವನಾಥ ; “ಕ” ಎಂಬ ನೀರನ್ನು ಈ ಕ್ಷೇತ್ರದಲ್ಲಿ ನಿರ್ಮಿಸಿರುವುದರಿಂದ ಪಾಜಕ

 

ಅರ್ಥಂ ಕಮಪ್ಯನವಮಂ ಪುರುಷಾರ್ಥ ಹೇತುಂ
ಪುಂಸಾಂ ಪ್ರದಾತು ಮುಚಿತಾಮುಚಿತ ಸ್ವರೂಪಾಂ |
ಕನ್ಯಾಂ ಸುವರ್ಣಲಸಿತಾಮಿವ ವೇದ ವಿದ್ಯಾಂ

ಜಗ್ರಾಹ ವಿಪ್ರ ವೃಷಭ ಪ್ರತಿಪಾದಿತಾಂ ಸ: |12|

ಸ: – ಆ ಮಧ್ಯಗೇಹ ಭಟ್ಟರು ಪುಂಸಾಂ – ಪುರುಷರಿಗೆ ಕಮಪಿ – ಯಾವುದು ಅನವಮಂ – ಹೊಸದಲ್ಲದೇ ಪುರುಷಾರ್ಥ ಹೇತುಂ – ಜ್ಞಾನೈಶ್ವರ್ಯಾದಿ ಪುರುಷಾರ್ಥಕ್ಕೆ ಕಾರಣವಾದ ಅರ್ಥಂ – ಅರ್ಥವನ್ನು ಪ್ರದಾತುಂ – ಕೊಡಲು ಉಚಿತಾಂ – ಯೋಗ್ಯವಾದ ಉಚಿತ ಸ್ವರೂಪಾಂ – ಯೋಗ್ಯ ಸ್ವರೂಪದ ಲಸಿತಾಂ – ಪ್ರಕಾಶಿಸುವ ಸುವರ್ಣ – ಬಂಗಾರದಂತೆ ಸುವರ್ಣ – ಶ್ರೇಷ್ಠ ವರ್ಣಗಳಿಂದ ಲಸಿತಾಂ – ಶೋಭಿತವಾದ ವಿಪ್ರ ಋಷಭ – ಬ್ರಾಹ್ಮಣ ಶ್ರೇಷ್ಟರಿಂದ ಪ್ರತಿಪಾದಿತಾಂ – ನೀಡಲ್ಪಟ್ಟ ಕನ್ಯಾಂ ಕನ್ಯೆಯನ್ನು ವೇದವಿದ್ಯಾಮಿವ – ವೇದವಿದ್ಯೆಯೆಂಬಂತೆ ಜಗ್ರಾಹ – ಸ್ವೀಕರಿಸಿದರು.

ವೇದವಿದ್ಯೆಯು ಬ್ರಾಹ್ಮಣರಿಂದ ಅಧ್ಯಯನ ಮಾಡಲು ಯೋಗ್ಯ ಸ್ವರೂಪವುಳ್ಳಂತೆ, ವೇದವಿದ್ಯಯೂ ಬ್ರಾಹ್ಮಣ ಶ್ರೇಷ್ಟರಿಂದ ಕೊಡಲ್ಪಟ್ಟಿದ್ದು, ಮಧ್ಯಗೇಹಭಟ್ಟರು ಕನ್ಯೆಯನ್ನೂ ಬ್ರಾಹ್ಮಣ ಶ್ರೇಷ್ಟರಿಂದ ಪಡೆದರು. ವೇದವಿದ್ಯೆಯು ಪರಬ್ರಹ್ಮ ಸ್ವರೂಪ ಮಧ್ವಾಚಾರ್ಯ ಎಂಬ ಮಗನ ರೂಪದಲ್ಲಿಯೂ, ಕನ್ಯೆಯು ಜ್ಞಾನೈಶ್ವರ್ಯಾದಿಗಳಿಗೆ ಕಾರಣರಾದರು.  ಮಧ್ವಾಚಾರ್ಯರ ತಾಯಿಯ ಹೆಸರನ್ನೂ ಎಲ್ಲೂ ಹೇಳಿಲ್ಲ. ವೇದವಿದ್ಯೆಯನ್ನು ಸ್ವೀಕರಿಸಿದರು ಎಂಬ ಪದದಿಂದ ಆಕೆಯ ಹೆಸರನ್ನು ವೇದವತಿ ಎಂದಿದ್ದಾರೆ.

ಸುಮಧ್ವವಿಜಯದಲ್ಲಿ ಆಚಾರ್ಯರ ತಂದೆ ಮಧ್ಯಗೇಹಭಟ್ಟರು ಅಥವಾ ನಡುಮನೆ ಭಟ್ಟರು ಎಂದು ಸೂಚ್ಯವಾಗಿ ಹೇಳಿದ್ದಾರೆ. ಅರ್ಥಾತ್ ಅವರು ನಡುಮನೆ ಅಂದರೆ ಮಧ್ಯದ ಮನೆಯವರಾದ್ದರಿಂದ ನಡುಮನೆ ಭಟ್ಟರು. ಗೇಹ ಎಂದರೆ ಮನೆ. ಮಧ್ಯಗೇಹ ಅಂದರೂ ಅಷ್ಟೇ.  ಅದೇ ರೀತಿ ವೇದವತಿ ಅವರ ತಾಯಿಯ ಹೆಸರಲ್ಲ. ಮಧ್ಯಗೇಹಭಟ್ಟರು ಶ್ರೇಷ್ಠ ಬ್ರಾಹ್ಮಣ ಪುತ್ರಿಯನ್ನು, ವೇದವಿದ್ಯೆಯನ್ನೂ ಸ್ವೀಕರಿಸಿದರು ಎಂಬ ಅರ್ಥದಲ್ಲಿ ವೇದಾವತಿ ಎಂದಿದ್ದಾರೆ.
(ಸುಮಧ್ವವಿಜಯ‌ ಸರ್ಗ೨, ಶ್ಲೋಕ ೧೨)
ರೇಮೇsಚ್ಚಯೋಪನಿಷ ದೇವಮಹಾ ವಿವೇಕೋ
ಭಕ್ತೈವ ಶುದ್ಧ ಕರಣ ಪರಮ ಶ್ರಿತಾsಲಮ್ |
ಮಿಥ್ಯಾಭಿಮಾನರಹಿತ: ಪರಯೇವ ಮುಕ್ತ್ಯಾ

ಸ್ವಾನಂದ ಸಂತತಿ ಕೃತಾ ಸ ತಯಾ ದ್ವಿಜೇಂದ್ರ:. ! 13 !

ದ್ವಿಜೇಂದ್ರ: ಬ್ರಾಹ್ಮಣ ಶ್ರೇಷ್ಟರಾದ ಮಹಾವಿವೇಕ: ಹೆಚ್ಚು ವಿವೇಕಿಗಳಾದ ಸ: ಮಧ್ಯಗೇಹಭಟ್ಟರು ಅಚ್ಚಯಾ – ನಿರ್ಮಲವಾದ ಉಪನಿಷದಾ ಇವ‌- ಉಪನಿಷತ್ತಿನಿಂದಲೋ ಎಂಬಂತೆ ಶುದ್ಧಕರಣ: ಶುದ್ಧ ಅಂತ:ಕರಣವುಳ್ಳವನು ಅಲಂ- ಅತ್ಯಂತವಾಗಿ ಪರಮಶ್ರಿತಾ – ಪರಮಾತ್ಮನ ಆಶ್ರಯಿಸಿ ಭಕ್ತ್ಯಾ ಇವ ಭಕ್ತಿಯಿಂದ ಮಿಥ್ಯಾಭಿಮಾನರಹಿತ: ಮಿಥ್ಯಾಜ್ಞಾನರಹಿತರಾಗಿ (ತನ್ನದೆಂಬ ಅಭಿಮಾನ ರಹಿತ ಪರಯಾ – ಉತ್ತಮ ಮುಕ್ತ್ಯಾ ಇವ – ಮುಕ್ತಿಯಿಂದ ಎಂಬಂತೆ ಸ್ವಾನಂದ – ಉತ್ತಮ ಆನಂದತೀರ್ಥರೆಂಬ ಸಂತತಿ – ಸಂತತಿಯ ಕೃತಾ – ಉಂಟಾದ ಸ್ವ ಆನಂದ ತನ್ನ ಆನಂದದ ಸಂತತಿ -ಸಂತತಿಯನ್ನು ಕೃತಾ – ಉಂಟಾದ ತಯಾ – ಆಕೆಯಿಂದ (ವೇದವತಿಯಿಂದ) ರೇಮೇ – ಕ್ರೀಡಿಸಿದರು.

ತಸ್ಯ ಪ್ರಭೋಶ್ಚರಣಯೋ: ಕುಲದೇವತಾಯಾ:
ಭಕ್ತಿಂ ಬಬಂಧ ನಿಜ ಧರ್ಮರತ: ಸ ಧೀರ: |
ವಿಜ್ಞಾನ ಭಾರತ ಪುರಾಣ ಮಹಾ ರಹಸ್ಯಂ

ಯಂ ಭಟ್ಟ ಇತ್ಯಭಿವದಂತಿ ಜನಾ ವಿನೀತಂ | 14 |

ಭಟ್ಟರು ಎಂದರೆ ಯಾರು ?
ಯಾರು ಮಹಾಭಾರತ ಪುರಾಣಗಳ ಮಹಾರಹಸ್ಯವನ್ನು ತಿಳಿದಿರುತ್ತಾರೋ, ಜಿತೇಂದ್ರಿಯರಾಗಿರುತ್ತಾರೋ ಅಂತಹ ಮಧ್ಯಗೇಹಭಟ್ಟರನ್ನು ಜನರು ಭಟ್ಟರು ಎನ್ನುತ್ತಿದ್ದರು. ಆ ಮಧ್ಯಗೇಹ ಭಟ್ಟರು ತನ್ನ ಕುಲದೇವತೆಯಾದ ಅನಂತೇಶ್ವರನ ಪಾದಗಳಲ್ಲಿ ಭಕ್ತಿಯನ್ನು ಮಾಡಿದರು.

ಮಧ್ಯಗೇಹಭಟ್ಟರು ಅನಂತೇಶ್ವರನ ಪಾದಗಳಲ್ಲಿ ಮಹಾತ್ಮ ಜ್ಞಾನ ಪೂರ್ವಕ ಸುಧೃಡಭಕ್ತಿಯಿಂದ ವರ್ಣಾಶ್ರಮ ಯೋಚಿತ ಧರ್ಮದಲ್ಲಿ – ಸತ್ಕರ್ಮದಲ್ಲಿ ಆಸಕ್ತರು. ಜನರು ಇವರನ್ನು ಭಟ್ಟರು ಎಂದು ಕರೆದರು.

ಗೋವಿಂದ ಸುಂದರ ಕಥಾ ಸುಧಯಾ ‌ಸ ನೃಣಾಮ್
ಆನಂದಯನ್ ನ ಕಿಲ ಕೇವಲಮಿಂದ್ರಿಯಾಣಿ |
ಕಿಂತು ಪ್ರಭೋ ರಜತ ಪೀಠ ಪುರೇ ಪದಾಬ್ಜಂ

ಶ್ರೀ ವಲ್ಲಭಸ್ಯ ಭಜತಾಮಪಿ ದೈವತಾನಾಮ್| 15 |

ಗೋವಿಂದ ಸುಂದರ ಕಥಯಾ – ಗೋವಿಂದನ ಸುಂದರವಾದ ಕಥೆಯಿಂದ ಸ: ಮಧ್ಯಗೇಹಭಟ್ಟರು ನೃಣಾಂ ಮನುಷ್ಯರ ಕೇವಲಂ ಇಂದ್ರಿಯಾಣಿ – ಕೇವಲ ಇಂದ್ರಿಯಗಳನ್ನು ನ ಆನಂದಯತ್ – ಸಂತೋಷಗೊಳಿಸಲಿಲ್ಲ. ಕಿಂತ್ತು ರಜತಪೀಠಪುರೆ – ಉಡುಪಿಯಲ್ಲಿ ಪ್ರಭೋ: – ಸ್ವಾಮಿಯಾದ ಶ್ರೀವಲ್ಲಭಸ್ಯ – ಲಕ್ಷ್ಮೀಕಾಂತನ ಪದಾಬ್ಜಂ– ಪಾಜಕಮಲಗಳನ್ನು ಭಜತಾಂ – ಭಜಿಸುವ ದೈವತಾನಾಮಪಿ – ದೇವತೆಗಳನ್ನೂ ಸಂತೋಷಪಡಿಸಿದರು.

ಮಧ್ಯಗೇಹಭಟ್ಟರು ಗೋವಿಂದನ ಕಥೆಯನ್ನು ಹೇಳುವ ಮೂಲಕ ಮನುಷ್ಯರನ್ನೂ ಮತ್ತು ಲಕ್ಷ್ಮೀಕಾಂತನ ಭಜಿಸುವ ದೇವತೆಗಳನ್ನೂ ತೃಪ್ತಿಗೊಳಿಸಿದರು.

ಇತ್ಥಂ ಹರೇರ್ಗುಣಕಥಾ ಸುಧಯಾ ಸುತೃಪ್ತೋ
ನೈರ್ಗುಣ್ಯವಾದಿಷು ಜನೇಷ್ವಪಿ ಸಾಗ್ರಹೇಷು |
ತತ್ವೇ ಸ ಕಾಲಚಲಧೀರತಿ ಸಂಶಯಾಲು:

ಧೀಮಾನ್ ಧಿಯಾ ಶ್ರವಣ ಶೋಧಿತಯಾ ಪ್ರದಧ್ಯೌ ! 16 !

ನೈರ್ಗುಣ್ಯವಾದಿಷು – ಬ್ರಹ್ಮನಿಗೆ ನಿರ್ಗುಣತ್ವವನ್ನು ಪ್ರತಿಪಾದಿಸುವ ಜನೇಷು – ಜನರು ಸಾಗ್ರಹೇಷು – ಆಗ್ರಹದಿಂದ ಇತ್ಥಂ – ಈ ರೀತಿಯಲ್ಲಿ ಹರೇ: – ಶ್ರೀ ಹರಿಯ ಗುಣಕಥಾ ಸುಧಯಾ – ಗುಣಕಥೆಯೆಂಬ ಅಮೃತದಿಂದ ಸುತೃಪ್ತ: ಚೆನ್ನಾಗಿ ತೃಪ್ತರಾದ ಕಾಲಚಲ – ಕಲಿಗಾಲ ಪ್ರಭಾವದ ಉಂಟಾದ ಧೀ: – ಬುದ್ಧಿಯುಳ್ಳ ತತ್ವೇ ತತ್ವದಲ್ಲಿ ಅತಿಸಂಶಯಾಲು – ಅತ್ಯಂತ ಸಂಶಯದಿಂದ ಧೀಮಾನ್ – ಬುದ್ಧಿವಂತರಾದ ಸ: – ಮಧ್ಯಗೇಹಭಟ್ಟರು ಶ್ರವಣ – ಶಾಸ್ತ್ರ ಶ್ರವಣದಿಂದ ಶೋಧಿತಯಾ – ಶುದ್ಧವಾದ ಧಿಯಾ ಪ್ರದಧ್ಯೌ – ಬುದ್ಧಿಯಿಂದ ಯೋಚಿಸಿದರು.

ತಾತ್ವಿಕ ವಿಷಯದಲ್ಲಿ ಕಲಿಗಾಲ ಪ್ರಭಾವಕ್ಕೊಳಗಾಗಿ ಜನರಲ್ಲಿ ಪರಮಾತ್ಮನಿಗೆ ನಿರ್ಗುಣತ್ವ (ಗುಣಗಳಿಲ್ಲಎಂದು) ಪ್ರತಿಪಾದಿತವಾಗಿತ್ತು. ಇದರಿಂದ ಸಜ್ಜನರ ಮನಸ್ಸು ಕಲುಷಿತವಾಗಿದ್ದು ಚಂಚಲವಾಗಿತ್ತು. ಆದರೆ ಮಧ್ಯಗೇಹ ಭಟ್ಟರ ಮನಸ್ಸು ಸಚ್ಛಾಸ್ತ್ರ ಶ್ರವಣ ಮತ್ತು ಅಧ್ಯಯನದಿಂದ ಶುದ್ಧವಾಗಿತ್ತು.

ತ್ರಾತಾಯ ಏವ ನರಕಾತ್ ಸ ಹಿ ಪುತ್ರನಾಮಾ
ಮುಖ್ಯಾವನಂ ನ ಸುಲಭಂ ಪುರುಷಾದಪೂರ್ಣಾತ್ !
ತಸ್ಮಾತ್ ಸಮಸ್ತವಿದಪತ್ಯಮವದ್ಯಹೀನಂ
ವಿದ್ಯಾಕರಾಕೃತಿ ಲಭೇಮಹಿ ಕೈ ರುಪಾಯೈ: !! 17 !!

ಯ: – ಯಾರು ನರಕಾತ್ – ನರಕ ಭಯದಿಂದ ತ್ರಾತಾ – ಕಾಪಾಡುವರೋ ಸ: ಏವ ಹಿ – ಅವನನ್ನೇ ಪುತ್ರ ನಾಮಾ – ಪುತ್ರನೆಂಬ ಹೆಸರುಳ್ಳವನು ಮುಖ್ಯಾವನಂ – ಮುಖ್ಯ ರಕ್ಷಣೆಯು ಅಪೂರ್ಣಾತ್ ಅಪೂರ್ಣ ಗುಣದಿಂದ ಕೂಡಿದ ಪುರುಷಾತ್ – ಮನುಷ್ಯನಿಂದ ನ ಸುಲಭಂ – ಸುಲಭವಾಗಿ ದೊರೆಯುವಂತದ್ದಲ್ಲ. ತಸ್ಮಾತ್ – ಆದ್ದರಿಂದ ಸಮಸ್ತವಿತ್ – ಎಲ್ಲವನ್ನೂ ಅರಿತ ಅವದ್ಯಹೀನಂ – ದೋಷದೂರನಾದ ವಿದ್ಯಾಕರಾಕೃತಿ – ವಿದ್ಯೆಗಳಿಗೆ ಗಣಿಯಂತಿರುವ ಆಕೃತಿಯುಳ್ಳ ಅಪತ್ಯಂ – ಮಗನನ್ನು ಕೈ: – ಯಾವ ಉಪಾಯೈ – ಸಾಧನದಿಂದ ಲಭೇಮಹಿ – ಹೊಂದುತ್ತೇವೆ.

ಯಾರು ಪುನ್ನಾಮ ನರಕದಿಂದ ರಕ್ಷಿಸುವನೋ ಅವನೇ ಪುತ್ರ. ತತ್ವಜ್ಞಾನದಲ್ಲಿ ಸಂಶಯ ದೂರ ಮಾಡದ ಸರ್ವಜ್ಞನಲ್ಲದ ಮಗನು ಸರಿಯಾಗಿ ಪೊರೆಯಲಾರ. ಮಧ್ಯಗೇಹಭಟ್ಟರಿಗೆ ತತ್ವದಲ್ಲಿ ಸಂಶಯವಿದೆ. ಯಥಾರ್ಥಜ್ಞಾನ ವಾಗಬೇಕು. ಹೀಗೆ ವಿದ್ಯೆಯ ಉತ್ಪತ್ತಿಸ್ಥಾನ ಭೂತ ಸ್ವರೂಪವುಳ್ಳ ಸಂತತಿಯನ್ನು ಯಾವ ಉಪಾಯದಿಂದ (ಸಾಧನದಿಂದ) ಪಡೆಯುವುದು ಎಂದು ಚಿಂತಿಸಿದರು.

 

ಪೂರ್ವೇsಪಿ ಕರ್ದಮ ಪರಾಶರ ಪಾಂಡುಮುಖ್ಯಾ:
ಯತ್ ಸೇವಯಾ ಗುಣ ಗಣಾಢ್ಯಮಪತ್ಯಮಾಪು: !
ತಂ ಪೂರ್ಣ ಸದ್ಗುಣತನುಂ ಕರುಣಾಮೃತಾಬ್ಧಿಂ

ನಾರಾಯಣಂ ಕುಲಪತಿಂ ಶರಣಂ ವ್ರಜೇಮ !! 18 !!

ಪೂರ್ವೇsಪಿ – ಮೊದಲು ಕರ್ದಮಪರಾಶರ ಪಾಂಡುಮುಖ್ಯಾ: – ಕರ್ದಮರು, ಪರಾಶರರು, ಪಾಂಡು ಮೊದಲಾದ ಮ‌ಹಾರಾಜರುಗಳು ಯತ್ಸೇವಯಾ – ಯಾರ ಸೇವೆಯಿಂದ ಗುಣ ಗುಣ – ಗುಣಗಳ ಸಮೂಹದಿಂದ ಆಡ್ಯಂ – ಪೂರ್ಣರಾದ ಅಪತ್ಯಂ – ಮಗನನ್ನು ಆಪು: ಹೊಂದಿದರೋ ತಂ – ಅಂತಹ ಸದ್ಗುಣತನುಂ ಪೂರ್ಣ – ಸದ್ಗುಣಗಳೇ ಶರೀರವಾಗುಳ್ಳ ಪೂರ್ಣವಾದ ಕರುಣಾಮೃತ – ಕರುಣೆಯೆಂಬ ಅಬ್ಧಿಂ – ಸಮುದ್ರವಾದ ಕುಲಪತಿಂ – ಕುಲದೇವರಾದ ನಾರಾಯಣಂ ಅನಂತೇಶ್ವರನನ್ನು ಶರಣ ವ್ರಜೇಮ – ಹೊಂದೋಣ.

ಇತ್ಥಂ ವಿಚಿಂತ್ಯ ಸ ವಿಚಿಂತ್ಯಮನನ್ಯ ಬಂಧು:
ಪ್ರೇಷ್ಠಪ್ರದಂ ರಜತಪೀಠ ಪುರಾಧಿವಾಸಂ !
ಭಕ್ತ್ಯಾಭವಾಬ್ಧಿ ಭಯಭಂಗದಯಾ ಶುಭಾತ್ಮಾ

ಭೇಜೇ ಭುಜಂಗ ಶಯನಂ ದ್ವಿಷಡಬ್ಧಕಾಲಂ ! 19 !

ಅನನ್ಯಬಂಧು: – ಬೇರೆ ಬಂಧು ರಹಿತನಾದ (ಭಗವಂತನ ಬಿಟ್ಟು ಬೇರೆ ಬಂಧುರಹಿತನಾದ) ಶುಭಾತ್ಮಾ – ನಿರ್ಮಲವಾದ ಆತ್ಮ (ಅಂತಃಕರಣ) ವುಳ್ಳ ಸ: ಆ ಬ್ರಾಹ್ಮಣರು (ಮಧ್ಯಗೇಹ ಭಟ್ಟರು) ವಿಚಿಂತ್ಯಂ – ಪ್ರಮೇಯವನ್ನು ಇತ್ಥಂ ವಿಚಿಂತ್ಯ – ಪೂರ್ವೋಕ್ತ ಪ್ರಕಾರ ವಿಚಾರ ಮಾಡಿ ಪ್ರೇಷ್ಟಪ್ರದಂ – ಇಷ್ಟಾರ್ಥಗಳನ್ನು ಪ್ರಧಾನ ಮಾಡುವ ರಜತಪೀಠಪುರಾಧಿವಾಸಂ – ಉಡುಪಿಯಲ್ಲಿ ವಾಸಿಸುವ ಭುಜಂಗ ಶಾಯಿನಂ – ಶೇಷಶಾಯಿಯಾದ ಅನಂತೇಶ್ವರನ ಭವಾಬ್ದಿಭಯ– ಸಂಸಾರವೆಂಬ ಸಮುದ್ರದ ಭಯದ ಭಂಗದಯಾ – ನಾಶವನ್ನು ಕೊಡುವ ಭಕ್ತ್ಯಾ – ಭಕ್ತಿಯಿಂದ ದ್ವಿಷಡಬ್ದಕಾಲಂ – ಹನ್ನೆರಡು ವರ್ಷ ಕಾಲ ಭೇಜೇ – ಸೇವಿಸಿದರು.

ಉಡುಪಿಯಲ್ಲಿ, ಸ್ವಚ್ಛ ಮನಸ್ಸುಳ್ಳ, ಭಗವದ್ವ್ಯತಿರಿಕ್ತ ಬಂಧುರಹಿತರಾದ ಮಧ್ಯಗೇಹಭಟ್ಟರು ಶೇಷಶಾಯಿಯಾದ ಅನಂತೇಶ್ವರನ ಸತ್ಪುತ್ರಲಾಭಕ್ಕಾಗಿ ಮಹಾತ್ಮ್ಯಜ್ಞಾನಪೂರ್ವಕ ಸುದೃಢ ಸ್ನೇಹದಿಂದ ಹನ್ನೆರಡು ವರ್ಷ ಸೇವಿಸಿದರು.

ಪತ್ನ್ಯಾ ಸಮಂ ಭಗವತ: ಸ ಭಜನ್ಪದಾಬ್ಜಂ
ಭೋಗಾನ್ ಲಘೂನಪಿ ಪುನರ್ಲಘಯಾಂಚಕಾರ !
ದಾಂತಂ ಸ್ವಯಂ ಚ ಹೃದಯಂ ದಮಯಾಂಚಕಾರ

ಸ್ವಚ್ಛಂ ಚ ದೇಹಮಧಿಕಂ ವಿಮಲೀಚಕಾರ ! 20 !

ಪತ್ನ್ಯಾಸಮಂ – ಪತ್ನಿಯೊಂದಿಗೆ ಕೂಡಿ ಭಗವತ: – ಶ್ರೀಹರಿಯ ಪದಾಬ್ಜಂ – ಪಾದ ಕಮಲವನ್ನು ಭಜನ್ – ಸೇವಿಸುವ ಸ: – ಮಧ್ಯಗೇಹಭಟ್ಟರು ಲಘೂನ್ – ಲಘುವಾದ ಭೋಗಾನಪಿ – ವಿಷಯಸುಖ ಕೂಡ ಪುನಃ – ಮತ್ತೆ ಭಗವದ್ಭಜನಾನಂತರ ಲಘಯಾಂಚಕಾರ – ಲಘುವಾಗಿ ಮಾಡಿದರು. ದಾಂತಂ ಹೃದಯಂ – ವಿಷಯ ನಿವೃತ್ತಿಯಿರುವ ಹೃದಯವನ್ನು ದಮಯಾಂಚಕಾರ – ದಮನ ಮಾಡತಕ್ಕಂತವರಾದರು. ಸ್ವಚ್ಛಂ – ಶುದ್ಧವಾದ ದೇಹಂ– ಶರೀರವನ್ನು ಅಧಿಕಂ ವಿಮಲೀಚಕಾರ – ಮತ್ತಷ್ಟು ಶುಚಿಗೊಳಿಸಿದರು.

ಮಧ್ಯಗೇಹಭಟ್ಟರು ತಮ್ಮ ಪತ್ನಿಯೊಂದಿಗೆ ವಿಷಯಸುಖದಿಂದ ದೂರವಾದ ಮನಸ್ಸನ್ನು ವಿಷಯಾಪೇಕ್ಷೆಯಿಂದ ದೂರವಾಗಿ ಭೋಗಗಳನ್ನು ಮತ್ತಷ್ಟು ಕಡಿಮೆ ಮಾಡಿದರು. ಮತ್ತು ತಮ್ಮ ದೇಹವನ್ನು ಮತ್ತಷ್ಟು ಬಾಹ್ಯಾಂತರ ಶುದ್ಧಿಗೊಳಿಸಿದರು.

ತೀವ್ರೈ: ಪಯೋವ್ರತಮುಖೈ: ವಿವಿಧೈ: ವ್ರತಾಗ್ರೈ:
ಜಾಯಾಪತೀ ಗುಣಗಣಾರ್ಣವ ಪುತ್ರಕಾಮೌ !
ಸಂಪೂರ್ಣ ಪೂರುಷಮತೋಷಯತಾಂ ನಿತಾಂತಂ

ದೇವೇರಿತಾವಿವ ಪುರಾsದಿತಿಕಶ್ಯಪೌ ತೌ ! 21 !

ಗುಣಗಣಾರ್ಣವ – ತತ್ವಜ್ಞಾನಾದಿ ಸಮೂಹದ ಸಮುದ್ರದಂತೆ ಇರುವ ಪುತ್ರಕಾಮೌ – ಪುತ್ರನನ್ನು ಇಚ್ಛಿಸುತ್ತ ಜಾಯಾಪತಿ – ಮಧ್ಯಗೇಹದಂಪತಿಗಳು (ಜಾಯಾ – ಪತ್ನಿ ; ಪತಿ – ಪತಿ. ಜಾಯಾಪತಿ ಎಂದರೆ ಪತಿಪತ್ನಿ – ದಂಪತಿ) ತೀವ್ರೈ : – ತೀವ್ರವಾದ ಪಯೋವ್ರತ ಮುಖೈ: – ಕ್ಷೀರವ್ರತವೇ ಮೊದಲಾದ ವಿವಿದೈ: ನಾನಾ ವಿಧ ವ್ರತಾಗ್ರೈ: – ಶ್ರೇಷ್ಠ ವ್ರತಗಳಿಂದ ಸಂಪೂರ್ಣ ಪೂರುಷಂ – ಅನಂತಾನಂತ ಗುಣಪೂರ್ಣನಾದ ಪುರುಷಂ – ಪುರುಷಶಬ್ದವಾಚ್ಯ ಅನಂತೇಶ್ವರನನ್ನು ನಿತಾಂತಂ – ಅತ್ಯಂತ ಪುರಾ – ಹಿಂದೆ ವಾಮನಾವತಾರದಲ್ಲಿ ದೇವೇರಿತೌ – ದೇವತೆಗಳ ಪ್ರೇರಣೆಯಿಂದ ಅದಿತಿ ಕಶ್ಯಪೌ ಇವ – ಅದಿತಿಕಶ್ಯಪರಂತೆ ಸಂತೋಷಯತಾಂ – ಸಂತೋಷಪಡಿಸಿದರು.

ಹಿಂದೆ ವಾಮನಾವತಾರ ಕಾಲದಲ್ಲಿ ದೇವತೆಗಳಿಂದ ಪ್ರೇರಿತರಾಗಿ ಪುತ್ರಾಪೇಕ್ಷೆಯಿಂದ ಅದಿತಿ ಕಶ್ಯಪರು ಪಯೋವ್ರತಾದಿ ಮಾಡಿದಂತೆ ಮಧ್ಯಗೇಹ ಭಟ್ಟ ದಂಪತಿಗಳು ಪಯೋವ್ರತಾದಿ ವ್ರತವೆಂಬ ತಪಸ್ಸು ಮಾಡಿದರು. ಮತ್ತು ಅನಂತಕಲ್ಯಾಣ ಗುಣ ಪರಿಪೂರ್ಣನಾದ ಶ್ರೀಹರಿಯನ್ನು ಮೆಚ್ಚಿಸಿದರು.

ನಾಥಸ್ಯ ಭೂರಿಕರುಣಾ ಸುಧಯಾsಭಿಷಿಕ್ತೌ
ಶ್ರೀ ಶ್ರೀಧರ ಪ್ರತತಿ ಶಾರಶರೀರಯಷ್ಟೀ !
ಭೂರಿವ್ರತಪ್ರಭವ ದಿವ್ಯ ಸುಕಾಂತಿಮಂತೌ ತೌ

ದೇಹಶುದ್ಧಿ ಮತಿಮಾತ್ರಮಥಾಲಭೇತಾಂ ! 22 !

ಅಥ – ನಂತರ ನಾಥಸ್ಯ – ನಾಥನಾದ ಅನಂತೇಶ್ವರನ ಭೂರಿಕರುಣಾ – ಬಹಳ ಕರುಣೆಯಿಂದ ಸುಧಯಾ – ಅಮೃತದಿಂದ ಅಭಿಷಿಕ್ತೌ – ಅಭಿಷಿಕ್ತರಾದ ಶ್ರೀ ಶ್ರೀಧರ – ಲಕ್ಷ್ಮೀ ಸಹಿತ ನಾರಾಯಣನು ಪ್ರತತಿ ಸಾರ – ವಿಶೇಷ ವ್ಯಾಪ್ತಿಯಿಂದ ಶ್ರೇಷ್ಟವಾದ ಶರೀರಯಷ್ಟೀ – ಶರೀರವೆಂಬ ದಂಡವುಳ್ಳ ಭೂರಿವ್ರತ – ಬಹಳ ವ್ರತಗಳ ದೆಸೆಯಿಂದ ಪ್ರಭವದಿವ್ಯ – ಉತ್ಪನ್ನವಾದ ದಿವ್ಯವಾದ ಸುಕಾಂತಿಮಂತೌ – ಉತ್ತಮ ಕಾಂತಿಯುಕ್ತರಾದ ತೌ – ಆ ದಂಪತಿಗಳು ದೇಹಶುದ್ಧಿಂ – ದೇಹಶುದ್ಧಿಯನ್ನು ಅತಿಮಾತ್ರಂ – ಅತ್ಯಂತವಾಗಿ ಅಲಭೇತಾಂ – ಹೊಂದಿದರು .

ಮಧ್ಯಗೇಹಭಟ್ಟ ದಂಪತಿಗಳು ಪರಮಾತ್ಮನ ಪಯೋವ್ರತಾದಿಗಳಿಂದ ತೃಪ್ತಿಪಡಿಸಿ ದೇಹಶುದ್ಧಿ ಪಡೆದರು. ಲಕ್ಷ್ಮೀದೇವಿಯನ್ನು ತನ್ನ ವಕ್ಷಸ್ಥಳದಲ್ಲಿ ಧರಿಸಿರುವ ಶ್ರೀಧರನ ಸೇವೆಯನ್ನು ಆಹಾರಾದಿ ಭೋಗ ತ್ಯಜಿಸಿ, ತೀವ್ರವಾದ ಪಯೋವ್ರತದಿಂದ ಪರಮಾತ್ಮನ ಸೇವಿಸಿದರು.

ಕಾಂತಾದೃತೌ ಸಮುಚಿತೇsಥ ಬಭಾರಗರ್ಭಂ
ಸಾ ಭೂಸುರೇಂದ್ರದಯಿತಾ ಜಗತಾಂ ಸುಖಾಯ !
ಅಚ್ಛಾಂಬರೇವ ರಜನೀ ಪರಿಪೂರಿತಾಶಾ

ಭಾವಿನ್ಯಪಾಸ್ತತಮಸಂ ವಿಧುಮಾದ್ಯಪಕ್ಷಾತ್ ! 23 !

ಅಥ – ಭಗವತ್ಸೇವೆಯಿಂದ ಉಂಟಾದ ದೇಹಶುದ್ಧಿ ನಂತರ ಅಚ್ಛಾಂಬರ – ನಿರ್ಮಲವಾದ ವಸ್ತ್ರವುಳ್ಳ, ಪರಿಪೂರಿತಾಶಾ – ಅಪೇಕ್ಷೆಗಳೆಲ್ಲ ಪೂರ್ಣಗೊಂಡವಳು ಭಾವಿನೀ – ಆಗುವ ಸಾ – ಆ ಭೂಸೂರೇಂದ್ರ – ಬ್ರಾಹ್ಮಣ ಶ್ರೇಷ್ಠರ ದುಹಿತಾ – ಮಗಳು (ಮಧ್ಯಗೇಹಭಟ್ಟರ ಹೆಂಡತಿ) ಜಗತಾಂ – ಲೋಕದ ಸುಖಾಯ – ಸೌಖ್ಯಕ್ಕಾಗಿ ಆದ್ಯಪಕ್ಷಾತ್ – ಪರಮಾತ್ಮನಲ್ಲಿ ಸಹಾಯದ ಕಾಂತಾತ್ – ಪತಿಯಿಂದ ಸಮುಚಿತೇ – ಯೋಗ್ಯವಾದ ಋತೌ – ಋತು ಕಾಲದಲ್ಲಿ ಜಗತಾಂ – ಸಜ್ಜನರಿಗೆ ಸುಖಾಯ – ಸುಖ ನೀಡಲು ಅಪಾಸ್ತ – ನಿವಾರಿತವಾದ ತಮಸಂ – ಅಜ್ಕಾನವುಳ್ಳ ಗರ್ಭಂ – ಗರ್ಭವನ್ನು ಬಭಾರ – ಧರಿಸಿದಳು.

ಅಚ್ಛಾಂಬರಾ – ನಿರ್ಮಲವಾದ ಆಕಾಶವುಳ್ಳ ಪರಿಪೂರಿತ ಆಶಾ – ಬೆಳದಿಂಗಳಿಂದ ಪೂರ್ಣವಾದ ದಿಕ್ಕುಗಳುಳ್ಳ ರಜನೀ – ರಾತ್ರಿಯು ಸಮುಚಿತೇ – ಚಂದ್ರನ ವಿಕಾಸಕ್ಕೆ ಹೊಂದತಕ್ಕ ಋತೌ – ಋತುವಿನಲ್ಲಿ, ಆದ್ಯಪಕ್ಷಾತ್ – ಶುಕ್ಲಪಕ್ಷದಿಂದ ಅಪಾಸ್ತ – ಹೋಗಲಾಡಿಸಲ್ಪಟ್ಟ ತಮಸಂ – ಅಂಧಕಾರದ ವಿಧುಮಿವ – ಚಂದ್ರನಂತೆ ಬಭಾರ – ಧರಿಸಿದ್ದಳು.

ರಾತ್ರಿಯು ಚಂದ್ರನ ಧರಿಸುತ್ತದೆ. ಚಂದ್ರ ತಮಸ್ಸೆಂಬ ಕತ್ತಲೆ ಕಳೆಯುವವ. ಲೋಕಕ್ಕೆ ಕತ್ತಲು ಪರಿಹರಿಸಿ ಹಿತವುಂಟು ಮಾಡಲು ವೇದವತಿಯು ಗರ್ಭವ ಧರಿಸಿ ಜಗತ್ತಿನ ಅಜ್ಞಾನ ಪರಿಹರಿಸಿ ಜಗತ್ತಿಗೆ ಹಿತವನ್ನು ನೀಡಲು ಉತ್ತಮ ಗರ್ಭವನ್ನು ಧರಿಸಿದಳು.

ಶ್ರೇಷ್ಠ ಬ್ರಾಹ್ಮಣ ಪುತ್ರಿಯಾದ ವೇದವತಿಯು (ಮಧ್ಯಗೇಹಭಟ್ಟರ ಪತ್ನಿ) ಗರ್ಭವ ಧರಿಸಿದ್ದು , ಅದು ಹೇಗಿತ್ತೆಂದರೆ, ರಾತ್ರಿಯು ಶುಕ್ಲ ಪಕ್ಷದ ಚಂದ್ರನ ಧರಿಸಿದಂತೆ ಪಯೋವ್ರತದಿಂದ ದೇಹಶುದ್ಧಿ ಪಡೆದಮೇಲೆ ಸ್ವಚ್ಛವಾದ ಬಟ್ಟೆಯುಳ್ಳವಳೂ ಆಗಿ ಗರ್ಭ ಧರಿಸಿದಂತಿತ್ತು.

ತಂ ಪೂರ್ವಪಕ್ಷಸಿತ ಬಿಂಬಮಿವ ಪ್ರವೃದ್ಧಂ
ಯಾವದ್ವಿಜೇಂದ್ರ ವನಿತಾ ಸುಷುವೇsತ್ರ ತಾವತ್ !
ಅಂಶೇನ ವಾಯುರವತೀರ್ಯ ಸ ರೂಪ್ಯಪೀಠೇ

ವಿಷ್ಣುಂ ಪ್ರಣಮ್ಯ ಭವನಂ ಪ್ರಯಯೌ ತದೀಯಂ ! ೨೪ !

ದ್ವಿಜೇಂದ್ರವನಿತಾ – ಬ್ರಾಹ್ಮಣ ಶ್ರೇಷ್ಠರ ಪತ್ನಿಯಾದ ವೇದವತಿಯು ಪೂರ್ವಪಕ್ಷ – ಶುಕ್ಲ ಪಕ್ಷದ ಸಿತ – ಶುಭ್ರವಾದ ಬಿಂಬಮಿವ – ಚಂದ್ರನಂತೆ ಪ್ರವೃದ್ಧಂ – ಅಭಿವೃದ್ಧವಾದ ತಂ – ಆ ಗರ್ಭವನ್ನು ಯಾವತ್ – ಯಾವಾಗ ಅತ್ರ – ಈ ಭೂಮಿಯಲ್ಲಿ ಸುಷುವೇ – ಹಡೆದರೋ ತಾವತ್ – ಆ ಸಮಯದಲ್ಲಿ ಸ: – ವಾಯುದೇವರು ಅಂಶೇನ – ಒಂದು ಅಂಶದಿಂದ ಅವತೀರ್ಯ – ಅವತರಿಸಿ ರೂಪ್ಯಪೀಠೆ – ಉಡುಪಿಯ ವಿಷ್ಣುಂ – ಅನಂತೇಶ್ವರನನ್ನು ಪ್ರಣಮ್ಯ – ನಮಿಸಿ ತದೀಯಂ – ಮಧ್ಯಗೇಹಭಟ್ಟರ ಭವನಂ – ಮನೆಗೆ ಪ್ರಯಯೌ – ಹೋದರು.

ಶುಕ್ಲ ಪಕ್ಷದ ಚಂದ್ರ ವೃದ್ಧಿ ಹೊಂದುವಂತೆ ವೇದವತಿಯ ಗರ್ಭವೂ ವೃದ್ಧಿ ಹೊಂದಿ ಒಂದಂಶದಿಂದ ವಾಯುದೇವರು ಗರ್ಭ ಪ್ರವೇಶಿಸಿ ಅವತಾರ ಮಾಡಿ, ರಜತಪೀಠಪುರದಲ್ಲಿರುವ ಅನಂತೇಶ್ವರನ ನಮಿಸಿ ಮಧ್ಯಗೇಹಭಟ್ಟರ ಮನೆಗೆ ಹೋದರು.

ಸಂಪೂರ್ಣ ಲಕ್ಷಣಚಣಂ ನವರಾಜಮಾನ
ದ್ವಾರಾಂತರಂ ಪರಮ ಸುಂದರಮಂದಿರಂ ತತ್ !
ರಾಜೇವ ಸತ್ಪುರವರಂ ಭುವನಾಧಿರಾಜೋ
ನಿಷ್ಕಾಸಯನ್ ಪರಮಸೌ ಭಗವಾನ್ ವಿವೇಶ ! 25 !

ಭುವನ – ಹದಿನಾಲ್ಕು ಲೋಕಗಳಿಗೆ ಅಧಿರಾಜ – ಸ್ವಾಮಿಯಾದ ಭಗವಾನ್ – ಷಡ್ಗುಣೈಶ್ವರ್ಯ ಸಂಪನ್ನರಾದ ಅಸೌ – ವಾಯುದೇವರು ಸಂಪೂರ್ಣ – ಪೂರ್ಣವಾದ ದ್ವಾತ್ರಿಂಶತ್ (೩೨) ಲಕ್ಷಣಗಳಿಂದ ಚಣಂ – ಪ್ರಸಿದ್ಧವಾದ ನವರಾಜಮಾನ- ನವಸಂಖ್ಯೆಯ ಪ್ರಕಾಶಮಾನ ದ್ವಾರಾಂತರಂ – ವಿಶೇಷ ದ್ವಾರಗಳುಳ್ಳ ಪರಮಸುಂದರ – ಅತ್ಯಂತ ರಮಣೀಯ ಮಂದಿರಂ -ಮನೆಯ ಸತ್ – ಆ ನಿರ್ದೋಷವಾದ ಪುರವರಂ – ಶ್ರೇಷ್ಠ ಶರೀರವನ್ನು ಪರಂ – ಆ ಗರ್ಭದಲ್ಲಿದ್ದ ಬೇರೆ ಜೀವವನ್ನು ನಿಷ್ಕಾಸಯನ್ – ವೇದವತಿಯ ಗರ್ಭದಿಂದ ಹೊರಹಾಕಿ, ಪರಂ – ಶತ್ರುವನ್ನು ವಿಜಿತ್ಯ – ಗೆದ್ದು ನಗರಾತ್ – ಪಟ್ಟಣದಿಂದ ನಿಷ್ಕಾಸಯನ್ – ಹೊರ ಹಾಕಲ್ಪಟ್ಟ ರಾಜಾ – ರಾಜನು ಸಂಪೂರ್ಣ ಲಕ್ಷಣಚಣಂ – ಪರಿಪೂರ್ಣ ಪಟ್ಟಣಲಕ್ಷಣದಿಂದ ಚಣಂ – ಪ್ರಸಿದ್ಧ ನವರಾಜಮಾನ ದ್ವಾರಾಂತರಂ – ನವಸಂಖ್ಯಾಕ ಪ್ರಕಾಶಮಾನವಾದ ದ್ವಾರಾಂತರಂ -ದ್ವಾರ ವಿಶೇಷಗಳಿಂದ ಕೂಡಿದ ಪರಮಸುಂದರ – ಅತ್ಯಂತ ರಮಣೀಯ ಮಂದಿರಂ -ಮಂದಿರವುಳ್ಳ ಸತ್ಪುರಮಿವ – ಶ್ರೇಷ್ಠ ನಗರದಂತೆ ವಿವೇಶ – ಪ್ರವೇಶಿಸಿದರು.

ಒಬ್ಬ ರಾಜನು ಪಟ್ಟಣದಲ್ಲಿದ್ದ ಶತ್ರುವನ್ನು ಹೊರಹಾಕಿ ಪಟ್ಟಣವು ಅರಾಜಕವಾಗದಂತೆ ಮಾಡುತ್ತಾನೆ. ಅದರಂತೆ ಭಗವಾನ್ (ಷಡ್ಗುಣೈಶ್ವರ್ಯ ಸಂಪನ್ನ) ವಾಯುದೇವರು ಗರ್ಭವಾಸ ರಹಿತರಾದ್ದರಿಂದ , ಅಲ್ಲಿಯವರೆಗೂ ಆ ವೇದವತಿಯ ಗರ್ಭದಲ್ಲಿದ್ದ ಜೀವವನ್ನು ಹೊರಹಾಕಿ ತಾವು ಆ ದೇಹ ಪ್ರವೇಶಿಸಿದರು. ವಾಯುದೇವರ ದೇಹ ಮೂವತ್ತೆರಡು ಲಕ್ಷಣೋಪೇತವಾದದ್ದು.

ದೇಹವೆಂಬ ಪಟ್ಟಣವು ಒಂಭತ್ತು ದ್ವಾರಗಳಿಂದ ಕೂಡಿದೆ – ಎರಡು ಕಿವಿ, ಎರಡು ಕಣ್ಣು, ಎರಡು ಮೂಗಿನ ದ್ವಾರ, ಒಂದು ಗುಹ್ಯದ್ವಾರ, ಒಂದು ಗುದದ್ವಾರ ಮತ್ತು ವದನ. ಶರೀರವು ಈ ಎಲ್ಲಾ ನವದ್ವಾರಾಂತರಗಳಿಂದ ಛಿದ್ರವಿಶೇಷವಾಗಿರತ್ತೆ.

ದೇಹವೆಂಬ ಪಟ್ಟಣವು ಪರಮಸುಂದರವಾಗಿದ್ದು ನಿರ್ದುಷ್ಟವಾಗಿದ್ದು, ಅತ್ಯಂತ ರಮಣೀಯ ಕಟ್ಟಡಗಳಿದ್ದು ಶ್ರೀಹರಿಗೆ ವಾಸಸ್ಥಾನವಾಗಿದೆ.

ಸಂತುಷ್ಯತಾಂ ಸಕಲಸನ್ನಿಕರೈರಸದ್ಭಿ:
ಖಿದ್ಯೇತ ವಾಯುರಯಮಾವಿರಭೂತ್ ಪೃಥಿವ್ಯಾಂ !
ಆಖ್ಯಾನ್ನಿತೀವ ಸುರದುಂದುಭಿ ಮಂದ್ರನಾದ:

ಪ್ರಾಶ್ರಾವಿ ಕೌತುಕವಶೈರಿಹ ಮಾನವೈಶ್ಚ ! 26 !

ಯಸ್ಮಾತ್ – ಯಾತಕ್ಕಾಗಿ ಅಯಂ ವಾಯು : – ವಾಯುದೇವರು ಪೃಥಿವ್ಯಾಂ – ಭೂಮಿಯಲ್ಲಿ ಆವಿರಭೂತ್ ಅವತರಿಸಿದರೋ ತಸ್ಮಾತ್ – ಆ ಕಾರಣದಿಂದ ಸಕಲ ಎಲ್ಲಾ ಸತ್ ನಿಕರೈ: – ಸಜ್ಜನ ಸಮೂಹದಿಂದ ಸಂತುಷ್ಯತಾಂ – ಸಂತೋಷಗೊಳ್ಳಲಿ, ಅಸದ್ಭಿ: – ದುರ್ಜನರಿಂದ ಖಿದ್ಯೇತ – ದು:ಖಿತರಾಗಲ್ಪಡಲಿ. ಇತಿ – ಹೀಗೆ ಆಖ್ಯಾನ್ನಿವ – ಹೇಳುವುದೋ ಎಂಬಂತಿರುವ ಕೌತುಕ ವಶೈ: ಕುತೂಹಲಕ್ಕೆ ವಶರಾದ ಮಾನವೈಶ್ಚ – ಮನುಜರಿಂದಲೂ ಸುರದುಂದುಭಿ – ದೇವದುಂದುಭಿಗಳ ಮಂದ್ರನಾದ: – ಗಂಭೀರ ಧ್ವನಿಯು ಪ್ರಾಶ್ರಾವಿ – ಕೇಳಿತು.

ವಾಯುದೇವರು ಅವತರಿಸಿದ ಕಾಲದಲ್ಲಿ ದೇವತೆಗಳಿಂದ ದುಂದುಭಿ – ಗಂಭೀರವಾದ ನಾದ ಮೂಡಿತು. ಆ ನಾದವನ್ನು ಆಲಿಸಿದ ಮನುಜರು ಕುತೂಹಲಭರಿತರಾದರು. ಆ ದುಂದುಭಿಯು ವಾಯುದೇವರ ಅವತಾರ ಕಾರಣದಿಂದ ಸಕಲ ಸಜ್ಜನರು ಸಂತಸಗೊಂಡರೆ ದುರ್ಜನರು ದು:ಖಪಡಲಿ ಎಂಬಂತಿತ್ತು. ಅರ್ಥಾತ್ ವಾಯುದೇವರ ಅವತಾರದಿಂದ ಸಜ್ಜನರು ಸಂತಸಗೊಂಡರೆ ದುರ್ಜನರಿಗೆ ದುಃಖವಾಯಿತು.

ನಾಥಂ ನಿಷೇವ್ಯ ಭವನಾನತಿದೂರಮಾಪ್ತ:
ಪ್ರಾಜ್ಞೋ ಮಹಪ್ರಕೃತದುಂದುಭಿನಾದ ಪೂರ್ವಾತ್ !
ಪುತ್ರೋದ್ಭವಶ್ರವಣತೋ ಮಹದಾಪ್ಯ ಸೌಖ್ಯಂ

ಜ್ಞಾನಂ ಪರೋಕ್ಷಪದಮಪ್ಯಮ- ತೇಷ್ಟಹೇತುಮ್ ! 27 !

ನಾಥಂ – ಕುಲದೇವತೆ ಯಾರು ಅನಂತೇಶ್ವರನನ್ನು ನಿಷೇವ್ಯ – ಸೇವಿಸಿ ಭವನ – ಮನೆಗೆ ಅನತಿದೂರಂ – ಸಮೀಪದಲ್ಲಿ ಆಪ್ತ: – ಬಂದಂತಹ ಪ್ರಾಜ್ಞ: – ಪ್ರಾಜ್ಞರಾದ (ಜ್ಞಾನಿಗಳಾದ) ಮಧ್ಯಗೇಹಭಟ್ಟರು ಮಹಪ್ರಕೃತ – ಪುತ್ರೋದ್ಭವ ಸಮಯದಲ್ಲಿ ಪ್ರಾಪ್ತವಾದ ದುಂದುಭಿನಾದ – ದುಂದುಭಿನಾದವು ಪೂರ್ವಾತ್ – ಪೂರ್ವದಲ್ಲಿ ಪುತ್ರೋದ್ಭವ – ಮಗನ ಜನನದ ಶ್ರವಣತ: – ಶ್ರವಣದಿಂದ ಮಹತ್ – ಬಹಳ ಸೌಖ್ಯಂ ಸುಖವನ್ನು ಆಪ್ಯ – ಹೊಂದಿ ಪರೋಕ್ಷಪದಂ – ಅಪ್ರತ್ಯಕ್ಷಕ್ಕೆ ವಿಷಯವಾಗುಳ್ಳ ಜ್ಞಾನಂ – ಜ್ಞಾನವನ್ನು ಇಷ್ಟಹೇತುಂ – ಸುಖಸಾಧನವಾಗಿ ಅಮತ – ತಿಳಿದರು.

ಮಧ್ಯಗೇಹಭಟ್ಟರು ಕುಲಸ್ವಾಮಿಯಾದ ಅನಂತೇಶ್ವರನ ಸೇವಿಸಿ ಮನೆಯಿಂದ ಸ್ವಲ್ಪ ದೂರದಲ್ಲಿ ಬಂದಿದ್ದಾಗ ನಗಾರಿ ಶಬ್ದ ಕೇಳಿತು. ದೇವದುಂದುಭಿ ನಾದವೂ ಕೇಳಿತು. ಅದೇ ವೇಳೆಗೆ ಜನರಿಂದ ಪುತ್ರೋದ್ಭವವಾದ ವಿಷಯವೂ ಕೇಳಿ ಆನಂದವಾಯಿತು.

ಆವಿಶ್ಯವೇಶ್ಮ ನಿಜನಂದನಮಿಂದುವಕ್ತ್ರಂ
ಭೂಯೋsಭಿನಂದ್ಯ ಸ ಮುಕುಂದದಯಾಂ ಪ್ರವಂದ್ಯ !
ಜಾತಸ್ಯ ತಸ್ಯಗುಣಜಾತವಹಸ್ಯ ಜಾತಕರ್ಮಾದಿ

ಕರ್ಮನಿವಹಂ ವಿದಧೇ ಸುಕರ್ಮಾ ! 28 !

ಸುಕರ್ಮಾ – ಉತ್ತಮವಾದ ಸ್ನಾನಸಂಧ್ಯಾದಿ ಕರ್ಮಗಳುಳ್ಳ ಸ: ಮಧ್ಯಗೇಹಭಟ್ಟರು ವೇಶ್ಮ – ಮನೆಯನ್ನು ಆವಿಶ್ಯ – ಪ್ರವೇಶಿಸಿ ಇಂದುವಕ್ತ್ರಂ – ಚಂದ್ರನಂತೆ ಮುಖವುಳ್ಳ ನಿಜನಂದನ – ತನ್ನ ಪುತ್ರನನ್ನು ದೃಷ್ವಾ – ನೋಡಿ ಭೂಯ: ಅತ್ಯಂತ ಅಭಿನಂದ್ಯ – ಸಂತೋಷದಿಂದ ಮುಕುಂದದಯಾಂ – ಅನಂತೇಶ್ವರನ ದಯವನ್ನು ಪ್ರವಂದ್ಯ – ವಂದಿಸಿ ಜಾತಸ್ಯ– ಅವತರಿಸಿದ ಗುಣಜಾತವಹಸ್ಯ – ಗುಣಗಳ ಸಮೂಹವನ್ನು ಧರಿಸಿದ ತಸ್ಯ – ತನ್ನ ಪುತ್ರನಿಗೆ ಜಾತಕರ್ಮ – ಜಾತಕರ್ಮವೇ ಆದಿ – ಮೊದಲಾದ ಕರ್ಮನಿವಹಂ – ಕರ್ಮಸಮೂಹವನ್ನು ವಿದಧೇ – ಮಾಡಿದರು.

ಪುತ್ರ ಜನನದ ವಿಷಯ ತಿಳಿದು ಸಂತಸಗೊಂಡ ಮಧ್ಯಗೇಹಭಟ್ಟರು ಮನೆಯನ್ನು ಪ್ರವೇಶಿಸಿದರು. ಚಂದ್ರನಂತೆ ಆಹ್ಲಾದಕರ ಮುಖವುಳ್ಳ ಪುತ್ರನನ್ನು ನೋಡಿ ಸಂತಸಗೊಂಡು ಮುಕ್ತಿದಾಯಕ ಅನಂತೇಶ್ವರನ ನಮಿಸಿ ಮಗನಿಗೆ ಜಾತಕರ್ಮಾದಿ ನೆರವೇರಿಸಿದರು.

ಜ್ಞಾನಾರ್ಥಮೇವ ಯದಭೂದಸುದೇವ ಏಷ:
ಯದ್ವಾಸುದೇವಪದಭಕ್ತಿರತ: ಸದಾsಸೌ !
ತದ್ವಾಸುದೇವಪದ ಮನ್ವವದನ್ ಸುರೇಂದ್ರಾ:

ತಾತೇನಯನ್ನಿಗದಿತಂ ಸುತನಾಮಕರ್ತ್ರಾ ! 29 !

ಯತ್ – ಯಾವ ಕಾರಣದಿಂದ ಜ್ಞಾನಾರ್ಥಮೇವ – ಜ್ಞಾನ ನೀಡಲು ಅಭೂತ್ – ಅವತರಿಸಿದರೋ ತಸ್ಮಾತ್ – ಆ ಕಾರಣದಿಂದ ಅಯಂ ಈ ಬಾಲಕನು ವಾಸುದೇವ ನಾಮ – ವಾಸುದೇವನೆಂಬ ಹೆಸರಿನ ಅಸೌ ಆ ಮುಖ್ಯಪ್ರಾಣರು ವಾಸುದೇವ – ವಾಸುದೇವ ನಾಮಕ ಪರಮಾತ್ಮನ ಪದ – ಚರಣಾರವಿಂದಗಳ ಭಕ್ತಿರತ: – ಭಕ್ತಿಯಲ್ಲಿ ಆಸಕ್ತನಾದನೋ ತಸ್ಮಾದಪಿ – ಈ ಕಾರಣದಿಂದಲೂ ವಾಸುದೇವ: – ವಾಸುದೇವ ಎಂಬ ಹೆಸರುಳ್ಳವನಾದನು.
ಸುತನಾಮಕರ್ತ್ರಾ – ಪುತ್ರನಿಗೆ ನಾಮಕರಣ ಮಾಡಲು ತಾತೇನ – ತಂದೆಯಾದ ಮಧ್ಯಗೇಹಭಟ್ಟರಿಂದ ಯತ್ ಯಾವ ವಾಸುದೇವಪದಂ – ವಾಸುದೇವ ಎಂಬ ಹೆಸರು ನಿಗದಿತಂ – ನಿಗದಿಯಾಯಿತೋ ತತ್ – ಆ ವಾಸುದೇವ ಎಂಬ ಹೆಸರನ್ನು ಸುರೇಂದ್ರಾ: – ದೇವತಾ ಶ್ರೇಷ್ಠರು ಅನ್ವವದನ್ – ಅನುಮೋದಿಸಿದರು.

ಮಧ್ಯಗೇಹಭಟ್ಟರು ವಾಸುದೇವ ಎಂಬ ಹೆಸರಿಟ್ಟರು. ಸಂಸ್ಕೃತದಲ್ಲಿ “ತಾತ” ಎಂದರೆ ತಂದೆ. ಆ ವಾಸುದೇವ ಎಂಬ ಹೆಸರು ದೇವತೆಗಳಿಂದಲೂ ಅನುಮೋದಿತವಾಯಿತು.

ಪುತ್ರ ವಾಸುದೇವ ಶಬ್ದ ವಾಚ್ಯನಾದ ಪರಮಾತ್ಮನ ಪಾದದಲ್ಲಿ ಭಕ್ತಿ, ಸುದೃಢ ಸ್ನೇಹ ಮತ್ತು ಚ್ಯುತಿ ರಹಿತ ಭಕ್ತಿಯಿಂದ ಕೂಡಿತ್ತು. ಸದಾ ವಾಯುದೇವರು ವಾಸುದೇವಪದಭಕ್ತಿರತರಾಗಿದ್ದಾರೆ. ಆದ್ದರಿಂದ ವಾಸುದೇವನ ಸಂಬಂಧಿಯಾದ್ದರಿಂದ ವಾಸುದೇವ ನಾಮ ಸಾರ್ಥಕವಾಗುತ್ತದೆ.

ಪಾತುಂ ಪಯಾಂಸಿಶಿಶವೇ ಕಿಲಗೋಪ್ರದೋsಸ್ಮೈ
ಪೂರ್ವಾಲಯ: ಸ್ವಸುತಸೂನುತಯಾ ಪ್ರಜಾತ: !
ನಿರ್ವಾಣ ಹೇತು ಮಲಭೀಷ್ಟ ಪರಾತ್ಮವಿದ್ಯಾಂ

ದಾನಂ ಧ್ರುವಂ ಫಲತಿ ಪಾತ್ರಗುಣಾನುಕೂಲ್ಯಾತ್ ! 30 !

ಶಿಶವೇ – ಬಾಲಕನಾದ ಅಸ್ಯೈ – ವಾಸುದೇವನಿಗೋಸ್ಕರ ಪಯಾಂಸಿ – ಹಾಲು, ಮೊಸರು ಮುಂತಾದವನ್ನು ಪಾತುಂ – ಪಾನ ಮಾಡಲಿಕ್ಕೆ ಗೋಪ್ರದ:– ಗೋವುಗಳನ್ನು ದಾನ ಮಾಡಿದ ಪೂರ್ವಾಲಯ: – ಪೂರ್ವಾಲಯ ಅಂದರೆ ಮೂಡಲ ಅಂದರೆ ಪೂರ್ವದಿಕ್ಕಿನಲ್ಲಿ ಮನೆಯುಳ್ಳ ಬ್ರಾಹ್ಮಣನು ಸ್ವಸುತ – ತನ್ನ ಮಗನಿಗೆ ಸೂನುತಯಾ – ಪುತ್ರತ್ವೇನ ಪ್ರಜಾತ: ಸನ್ – ಹುಟ್ಟಿದಂತವರಾಗಿ, ಮಧ್ವಾಚಾರ್ಯರ ದೆಸೆಯಿಂದ, ನಿರ್ವಾಣ – ಮೋಕ್ಷಕ್ಕೆ ಹೇತುಂ – ಕಾರಣವಾದ ಪರಾತ್ಮವಿದ್ಯಾಂ – ಪರಮಾತ್ಮನ ತಿಳಿಸುವ ಜ್ಞಾನವನ್ನು ಅಲಭೀಷ್ಟ – ಪಡೆದನು. ದಾನಂ – ದಾನವು ಪಾತ್ರಗುಣ ಅನುಕೂಲ್ಯಾತ್ – ಸತ್ಪಾತ್ರರ ಗುಣಗಳ ಅನುಕೂಲಕ್ಕಾಗಿ ಫಲತಿ – ಫಲಿಸುವುದು ಧ್ರುವಂ – ನಿಶ್ಚಯ.

ಮೂಡಿಲ್ಲಾಯ (ಮೂಡಣ ದಿಕ್ಕಿಗೆ ಮನೆಯುಳ್ಳವನು ) ಎಂಬ ಕುಲದಲ್ಲಿ ಹುಟ್ಟಿದ ಒಬ್ಬ ಬ್ರಾಹ್ಮಣನು ಮಧ್ಯಗೇಹಭಟ್ಟರಿಗೆ ಗೋದಾನ ಮಾಡಿ ವಾಸುದೇವನಿಗೆ ನಿತ್ಯ ಈ ಗೋವಿನ ಹಾಲನ್ನು ಬಳಸಲು ಹೇಳಿದರು. ಮೂಡಿಲ್ಲಾಯ ಬ್ರಾಹ್ಮಣರು ಮೃತನಾದ ಮೇಲೆ ಅವನ ಪುತ್ರನ ಪುತ್ರನಾಗಿ – ಮೊಮ್ಮಗನಾಗಿ ಜನಿಸಿದನು. ಮೂಡಿಲ್ಲಾಯರು ಮಾಡಿದ್ದು ಗೋದಾನವಾದರೂ ಅದಕ್ಕೆ ಬಂದ ಫಲ ಮುಕ್ತಿಪ್ರದ ತತ್ವಜ್ಞಾನ. ಇಲ್ಲಿ ದಾನ ಸ್ವೀಕರಿಸಿದ ಮಗುವು ಅತ್ಯಂತ ಸತ್ಪಾತ್ರನಾಗಿದ್ದರಿಂದ ತತ್ವಜ್ಞಾನ ಆಯಿತು.

ಅತ್ರಸ್ತಮೇವ ಸತತಂ ಪರಿಫುಲ್ಲಚಕ್ಷು:
ಕಾಂತ್ಯಾವಿಡಂಬಿತನವೇಂದು ಜಗತ್ಯನರ್ಘ್ಯಮ್ !
ತತ್ಪುತ್ರರತ್ನಮುಪಗೃಹ್ಯ ಕದಾಚಿದಾಪ್ತ:

ಸ್ವಸ್ವಾಮಿನೇ ಬುಧ ಉಪಾಯನ ಮಾರ್ಪಯತ್ಸ: ! 31 !

ಬುಧ: ಸ: – ಜ್ಞಾನಿಯಾದ ಮಧ್ಯಗೇಹಭಟ್ಟರು ‌ಸಂತತಂ – ಯಾವಾಗಲೂ ಅತ್ರಸ್ತಮೇವ – ಭಯರಹಿತನಾದ ದೋಷವಿಲ್ಲದ ಪರಿಫುಲ್ಲ – ಅರಳಿದ ಚಕ್ಷು: ಕಣ್ಣುಗಳುಳ್ಳ ಕಾಂತ್ಯಾ – ದೇಹಕಾಂತಿಯಿಂದ ವಿಡಂಬಿತ ನವ ಇಂದು – ಶುಕ್ಲ ಪಕ್ಷದ ಚಂದ್ರನ ಹೋಲುವ ಜಗತಿ – ಜಗತ್ತಿನಲ್ಲಿ ಅನರ್ಘ್ಯಂ – ಅಮೂಲ್ಯವಾದ ಪುತ್ರರತ್ನಂ – ರತ್ನದಂತಿರುವ ಪುತ್ರನನ್ನು ಉಪಗೃಹ್ಯ – ಸ್ವೀಕರಿಸಿ ಕದಾಚಿತ್ – ಒಂದಾನೊಂದು ದಿನ ಸ್ವಸ್ವಾಮಿನೇ – ಕುಲಸ್ವಾಮಿಯಾದ ಅನಂತೇಶ್ವರನ ಬಳಿ ಆಪ್ತ: ಸನ್ – ಬಳಿಬಂದು, ತತ್ ಆ ಪುತ್ರನ ಉಪಾಯನಂ – ಕಾಣಿಕೆಯಾಗಿ ಅರ್ಪಯತ್ – ಸಮರ್ಪಿಸಿದರು.

ಜ್ಞಾನಿಗಳಾದ ಮಧ್ಯಗೇಹಭಟ್ಟರು ಶುಕ್ಲ ಪಕ್ಷದ ಚಂದ್ರನ ಕಾಂತಿಯುಳ್ಳ ಭಯರಹಿತನಾದ ಆ ಮಗುವನ್ನು ತಮ್ಮ ಕುಲಸ್ವಾಮಿಯಾದ ಅನಂತೇಶ್ವರನ ಬಳಿ ಬಂದು ಸಮರ್ಪಿಸಿದರು.

ನತ್ವಾ ಹರಿಂ ರಜತಪೀಠಪುರಾಧಿವಾಸಂ
ಬಾಲಸ್ಯ ಸಂಪದ ಮನಾಪದಮರ್ಥಯಿತ್ವಾ !
ಸಾಕಂಸುತೇನ ಪರಿವಾರ ಜನಾನ್ವಿತೋsಸೌ

ಪ್ರಾಯಾನ್ ನಿಶೀಥ ಸಮಯೇ ನಿಜಮೇವಧಾಮ ! 32 !

ಅಸೌ – ಈ ಮಧ್ಯಗೇಹಭಟ್ಟರು ರಜತ ಪೀಠಪುರಾಧಿವಾಸಂ – ಉಡುಪಿಯಲ್ಲಿ ವಾಸಿಸುವ ಹರಿಂ – ಅನಂತೇಶ್ವರನಿಗೆ ನತ್ವಾ – ನಮಿಸಿ ಬಾಲಸ್ಯ – ಮಗುವಿಗೆ ಅನಾಪದಂ – ಅನಿಷ್ಟವಿಲ್ಲದ ಸಂಪದಂ – ಸಂಪತ್ತನ್ನು (ಶ್ರೇಯಸ್ಸನ್ನು) ಅರ್ಥಯಿತ್ವಾ – ಪ್ರಾರ್ಥಿಸಿ, ಸುತೇನ ಸಾಕಂ – ಮಗನೊಂದಿಗೆ ಪರಿವಾರ ಜನ: ಅನ್ವಿತ: ಸನ್ – ಪರಿವಾರ ಜನರೊಂದಿಗೆ ನಿಶೀಥ ಸಮಯೇ – ಮಧ್ಯರಾತ್ರಿ ಕಾಲದಲ್ಲಿ ನಿಜಮೇವ ಧಾಮ – ತಮ್ಮದೇ ಮನೆಗೆ ಪ್ರಾಯಾತ್ – ಪ್ರಯಾಣಿಸಿದರು.

ಮಧ್ಯಗೇಹಭಟ್ಟರು ಅನಂತೇಶ್ವರನಿಗೆ ನಮಿಸಿ ಮಗು ವಾಸುದೇವನಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿ ಮಧ್ಯರಾತ್ರಿಯ ಹೊತ್ತಿಗೆ ತಮ್ಮ ಪರಿವಾರದೊಂದಿಗೆ ಕೂಡಿ ತಮ್ಮ ಮನೆಗೆ ಹೊರಟರು.

ದೋಷೇಯುಷಾಂ ಸಮಮನೇನ ವನೇsತಿಭೀಮೇ
ತತ್ಕ್ರೀಡಿತ ಗ್ರಹ ಇಹೈಕತಮಂ ತುತೋದ !
ಉದ್ವಾಂತರಕ್ತಮವಲೋಕ್ಯ ತಮಭ್ಯಧಾಯಿ

ಕೇನಾಪ್ಯಹೋ ನ ಶಿಶುತುತ್ ಕಥಮೇಷ ಇತ್ಥಂ ! 33 !

ಅನೇನ – ಈ ಬಾಲಕನಿಂದ ಸಮಂ – ಕೂಡಿ ದೋಷಾ – ರಾತ್ರಿಯಲ್ಲಿ ಅತಿಭೀಮೇ – ಅತಿ ಭಯಂಕರವಾದ ವನೇ – ಕಾಡಿನಲ್ಲಿ ಈಯುಷಾಂ ಸತಾಂ – ಹೋಗುವಾಗ ತತ್ ಕ್ರೀಡಿತ – ಆ ಅರಣ್ಯದಲ್ಲಿ ವಿಹರಿಸುವ ಗ್ರಹ: – ಪಿಶಾಚಿಯು ಇಹ ಇಲ್ಲಿನ ಏಕತಮಂ – ಒಬ್ಬನನ್ನು ( ಜನಗಳ ಮಧ್ಯದಲ್ಲಿರುವ ಒಬ್ಬ ಪುರುಷನನ್ನು) ತುತೋದ – ಹಿಂಸಿಸಿತು. ಕೇನಾಪಿ – ಅಲ್ಲಿರುವ ಒಬ್ಬನಿಂದ ಉದ್ವಾಂತರಕ್ತಂ – ವಮನ ಮಾಡಿದ ರಕ್ತವುಳ್ಳ ತಂ – ಆ ಪಿಶಾಚ ಆಕ್ರಮಿತ ಪುರುಷನ ಅವಲೋಕ್ಯ – ನೋಡಿ ಏಷ: – ಈ ಗ್ರಹವು ಶಿಶುತುತ್ – ಶಿಶುವನ್ನು ಹಿಂಸಿಸುವುದು ಕಥಂ – ಹೇಗೆ ನ ಅಭೂತ್ – ಆಗಲಿಲ್ಲ. ಇತ್ಥಂ – ಹೀಗೆ ಅಭ್ಯದಾಯಿ – ಹೇಳಿತು.

ಮಧ್ಯರಾತ್ರಿ ಕಾಲದಲ್ಲಿ ಬಾಲಕನೊಂದಿಗೆ ಪ್ರಯಾಣಿಸುತ್ತಿದ್ದ ಮಧ್ಯಗೇಹಭಟ್ಟರು ಮತ್ತವರ ಪರಿವಾರವನ್ನು ಒಂದು ಪಿಶಾಚಿಯು ಹಿಂಸಿಸಿ, ಅವರ ಮಧ್ಯದಲ್ಲಿ ಇರುವ ಒಬ್ಬನು ರಕ್ತ ಕಾರಿದನು. ಆದರೆ ಆ ಪಿಶಾಚಿಯು ಮಗು ವಾಸುದೇವನನ್ನು ಏನೂ ಪೀಡಿಸಲಿಲ್ಲ

ಆವಿಶ್ಯಪೂರುಷಮುವಾಚ ಮಹಾಗ್ರಹೋsಸೌ
ಅಸ್ಮದ್ವಿಹಾರ ಸಮಯೋಪಗತಾನ್ ಸಮಸ್ತಾನ್ !
ಯಚ್ಛಕ್ತಿಗುಪ್ತಿರಹಿತಾನಲಮಸ್ಮಿಹಂತುಂ

ಲೋಕೇಶ್ವರ: ಸ ಬತ ಬಾಲತಮ: ಕಿಲೇತಿ ! 34 !

ಅಸೌ – ಈ ಮಹಾ ಪಿಶಾಚಿಯು ಪುರುಷಂ – ರಕ್ತ ವಾಂತಿ ಮಾಡಿದ ಪುರುಷನನ್ನು ಆವಿಶ್ಯ – ಪ್ರವೇಶಿಸಿ ಅಸ್ಮತ್ ವಿಹಾರ ಸಮಯ – ನಮ್ಮ ಕ್ರೀಡೆಯ ಸಮಯದಲ್ಲಿ (ಪಿಶಾಚಿಗಳು ಓಡಾಡುವ ಸಮಯ) ಉಪಗತಾನ್ – ಬಂದಂತಹ ಸಮಸ್ತಾನ್ – ಎಲ್ಲರನ್ನೂ ಯಚ್ಛಕ್ತಿ – ಯತ್ ಶಕ್ತಿ – ಯಾವ ವಾಯು ದೇವರ ಸಾಮರ್ಥ್ಯದ ಗುಪ್ತಿರಹಿತಾನ್ – ರಕ್ಷಣೆಯಿಲ್ಲದ ಯುಷ್ಮಾನ್ – ನಿಮ್ಮನ್ನು ಹಂತುಂ – ಕೊಲ್ಲಲು ಅಲಂ ಅಸ್ಥಿ – ಸಮರ್ಥನಾಗಿದ್ದಾನೆ. ಸ: ಬಾಲತಮ : – ಅತ್ಯಂತ ಸಣ್ಣ ಮಗು ಲೋಕೇಶ್ವರ: – ಲೋಕೇಶ್ವರನಾದ ವಾಯುದೇವರು ಬತ – ಆಶ್ಚರ್ಯ ಇತಿ ಉವಾಚ – ಎಂದು ಹೇಳಿತು.

ಆ ಮಹಾಪಿಶಾಚಿಯು ರಕ್ತವಮನ ಮಾಡಿದ ಪುರುಷನ ಪ್ರವೇಶಿಸಿ, ಅಲ್ಲಿದ್ದ ಜನರಿಗೆ ಹೇಳಿತು “ನೀವು ಪಿಶಾಚಿಯು ವಿಹಾರ ಸಮಯದಲ್ಲಿ ಸಂಚರಿಸುತ್ತಿದ್ದೀರಿ, ನಿಮ್ಮೆಲ್ಲರ ಕೊಲ್ಲಲು ನಾನೇ ಶಕ್ತ. ಆದರೆ ಈ ಮಗುವಿನಿಂದ ನಿಮ್ಮನ್ನು ಕೊಲ್ಲಲು ಸಾಧ್ಯವಾಗಲಿಲ್ಲ. ಆದ್ದರಿಂದಲೇ ಮಗುವಿಗೆ ಪೀಡೆ ಆಗಲಿಲ್ಲ. ಆಶ್ಚರ್ಯ. ಇದು ಸಾಮಾನ್ಯ ಮಗುವಲ್ಲ. ವಾಯುದೇವರೇ ಆದ್ದರಿಂದ ಎಲ್ಲರ ರಕ್ಷಿಸಿತು

ಸ್ತನ್ಯೇನಬಾಲಮನುತೋಷ್ಯ ಮುಹು: ಸ್ವಧಾಮ್ನೋ

ಮಾತಾ ಕದಾಚನ ಯಯೌ ವಿರಹಾ ಸಹಾsಪಿ !
ವಿಶ್ವಸ್ಯ ವಿಶ್ವಪರಿಪಾಲಕ ಪಾಲನಾಯ ಕನ್ಯಾಂ

ನಿಜಾಮನುಗುಣಾಂ ಕಿಲ ಭೀರುರೇಷಾ ! 35 !

ಭೀರು : – ಭಯಶೀಲಳಾದ ಏಷಾ – ಈ ತಾಯಿಯು ಕದಾಚನ – ಒಮ್ಮೆ ಬಾಲಕಂ – ವಾಸುದೇವನನ್ನು ಸ್ತನ್ಯೇನ ಮುಹು: – ಸ್ತನ್ಯಪಾನದಿಂದ ಪೂರ್ಣ ಅನುತೋಷ್ಯ– ತೃಪ್ತಿಗೊಳಿಸಿ ವಿರಹ ಅಸಹ – ಪುತ್ರ ವಿಯೋಗವಿದ್ದರೂ ಸ್ವಧಾಮ್ನ: – ತನ್ನ ಮಂದಿರದ ದೆಸೆಯಿಂದ ವಿಶ್ವಪರಿಪಾಲಕ – ಸಮಸ್ತ ವಿಶ್ವದ ಪಾಲಕರಾದ ವಾಯುದೇವರ ಪಾಲನಾಯ – ಪಾಲನೆಗಾಗಿ ಅನುಗುಣಾಂ – ಅನುಗುಣವಾಗಿ ಕನ್ಯಾಂ – ತನ್ನ ಮಗಳನ್ನು ವಿಶ್ವಸ್ಯ – ಒಪ್ಪಿಸಿ ಯಯೌ – ಹೊರಟಳು

ಒಮ್ಮೆ ವಾಸುದೇವನ ತಾಯಿಯು ಕಾರ್ಯಾಂತರದಿಂದ ಬೇರೆಲ್ಲೋ ಹೋಗುವ ಮುನ್ನ ಮಗುವಿಗೆ ಸ್ತನ್ಯಪಾನ ಮಾಡಿಸಿ ಹೋಗುವ ಮುನ್ನ ತನ್ನ ಮಗಳಿಗೆ (ವಿಶ್ವವನ್ನೇ ಪಾಲನ ಮಾಡುವ ವಾಯು ಪುತ್ರ) ಮಗುವನ್ನು ಕ್ಷೇಮದಿಂದ ನೋಡಿಕೊಳ್ಳಲು ಹೇಳಿ ಹೊರಟಳು.

ಸಾ ಬಾಲಕಂ ಪ್ರರುದಿತಂ ಪರಿಸಾಂತ್ವಯಂತೀ 

ಮುಗ್ಧಾಕ್ಷರೇಣ ವಚಸಾsನುನಿನಾಯ ಮುಗ್ಧಾ !
ಮಾ ತಾತ ತಾತ ಸುಮುಖೇತಿ ಪುನಃ: ಪ್ರರೋಧೀ

ಮಾತಾ ತನೋತಿ ರುಚಿತಂ ತ್ವರಿತಂ ತವೇತಿ ! 36 !

ಮುಗ್ಧಾ – ಮುಗ್ಧಳಾದ ಸಾ – ಆ ಬಾಲಕಿಯು (ವಾಸುದೇವನ ಸೋದರಿ) ಪ್ರರುದಿತಂ – ಬಹಳ ರೋದಿಸುತ್ತಿರುವ ಬಾಲಕಂ – ಮಗುವನ್ನು ಪರಿಸಾಂತ್ವಯಂತೀ ಸತಿ – ಸಮಾಧಾನ ಮಾಡುತ್ತಾ ಮುಗ್ಧಾಕ್ಷರೇಣ – ತೊದಲು ನುಡಿಯ ವಚಸಾ – ಮಾತಿನಿಂದ ಹೇ ತಾತ – ಎಲೈ ಮಗುವೇ , ಹೇ ಸುಮುಖ – ಸುಂದರ ಮುಖವುಳ್ಳವನೇ ಮಾತಾ ತ್ವರಿತಂ – ತಾಯಿಯು ಶೀಘ್ರದಲ್ಲೇ ತವ – ನಿನಗೆ ರುಚಿರಂ – ಇಷ್ಟವಾದ ಪುನಃ: – ಮತ್ತೆ ತನೋತಿ – ತರುತ್ತಾಳೆ. ಇತಿ – ಈ ಕಾರಣದಿಂದ ಮಾ ಪ್ರರೋದೀ: ಇತಿ – ಅಳಬೇಡ ಎಂದು ಅನುನಿನಾಯ – ಸಮಾಧಾನ ಪಡಿಸಿದಳು.

ತಾಯಿಯು ಬರುವವರೆಗೂ ಮಗುವನ್ನು ನೋಡಿಕೊಳ್ಳುವ ಜವಾಬ್ದಾರಿಯ ವಾಸುದೇವನ ಮುಗ್ಧ ಸೋದರಿಯು ಮುಗ್ಧವಾದ ಮಾತುಗಳಿಂದ ಮಗುವನ್ನು ಸಮಾಧಾನಿಸುತ್ತಾ ಅಳುವುದನ್ನು ನಿಲ್ಲಿಸಲು ಪ್ರಯತ್ನಿಸಿದಳು

ರೋದೇ ಕ್ರಿಯಾ ಸಮಭಿಹಾರತ ಏವವೃತ್ತೇ

ಪೋತಸ್ಯ ಮಾತರಿ ಚಿರಾದಪಿ ನಾsಗತಾಯಾಮ್ !
ಜಗ್ರಾಹ ಬಾಲಮಥಚೈಕ್ಷತ ಮಾತೃಮಾರ್ಗಂ

ಸಾsಪಿಕ್ರಿಯಾಸಮಭಿಹಾರತ ಏವಬಾಲಾ ! 37 !

ಪೋತಸ್ಯ – ಬಾಲಕನ ರೋದೇ – ರೋದನವು ಕ್ರಿಯಾಸಮಭಿಹಾರತ ಏವ – ಪುನಃ ಪುನಃ (ಸತತವಾಗಿ) ವೃತ್ತೇಸತಿ – ಹೆಚ್ಚಾಗಲು ಮಾತರಿ ಅಪಿ – ತಾಯಿಯೂ ಚಿರಾತ್ – ಬಹಳ ಕಾಲ ನ ಆಗತಾಯಾಮ್ – ಬರದೇ ಇರಲು ಬಾಲಾ – ಆ ಕನ್ಯೆಯು ಬಾಲಂ – ಮಗುವನ್ನು ಜಗ್ರಾಹ – ಎತ್ತಿಕೊಂಡು ಅಥ – ನಂತರ ಮಾತೃಮಾರ್ಗಂ – ತಾಯಿಯ ಬರುವಿಕೆಯನ್ನು ಕ್ರಿಯಾಸಮಭಿಹಾರತ ಏವ – ಎಡಬಿಡದೆ ಐಕ್ಷತ – ನಿರೀಕ್ಷಿಸಿದಳು.

ಸತತವಾಗಿ ಅಳುತ್ತಲೇ ಇದ್ದ ಮಗುವು ಮತ್ತಷ್ಟು ಜೋರಾಗಿ ಅಳತೊಡಗಿದಾಗ ಆ ಕನ್ಯೆಯು ಅಳುತ್ತಾ ಮಲಗಿದ್ದ ಮಗುವನ್ನು ಕೈಗೆ ಎತ್ತಿಕೊಂಡು ತಾಯಿಯ ಬರುವಿಕೆಯನ್ನು – ಅಂದರೆ ಯಾವಾಗ ಬರುವಳೆಂದೂ ಪ್ರತೀಕ್ಷಣ ಮಾಡಿದಳು.

ಕರ್ತವ್ಯಮೌಢ್ಯಮಭಿಪದ್ಯ ನಿರೂಪ್ಯ ಸಾ ತಂ

ಪ್ರಾಭೋಜಯತ್ ಖಲು ಕುಲಿತ್ಥಕುಲಂ ಪ್ರಪಕ್ವಂ !
ಶೀತಂ ಪಯೋsಪಿ ಸತತಂ ಪರಿಪಾಯಯಂತೀ

ಯಸ್ಯೋಷ್ಣರೋಗ ಮತಿವೇಲಮಶಂಕತಾಂಬಾ ! 38 !

ಅಂಬಾ – ತಾಯಿಯು ಯಸ್ಯ – ಯಾವ ಬಾಲಕನಿಗೆ ಅತಿವೇಲಂ – ಅತ್ಯಂತ ಉಷ್ಣರೋಗಂ – ಉಷ್ಣರೋಗವನ್ನು ಆಶಂಕತ – ಶಂಕಿಸಿದಳೋ, ಅತ ಏವ – ಆದ್ದರಿಂದಲೇ ಸತತಂ – ನಿರಂತರ ಪಯೋsಪಿ – ಹಾಲನ್ನೂ ಶೀತಂ – ಶೀತವಾದ ಪದಾರ್ಥವನ್ನೂ ಪರಿಪಾಯಯಂತೀ – ಕುಡಿಸುತ್ತಿದ್ದಳು .ಸಾ – ಆ ಕನ್ಯೆಯು ಕರ್ತವ್ಯಮೌಢ್ಯಂ ಅಭಿಪದ್ಯ– ಆ ಬಾಲಕನ ಸಮಾಧಾನ ಮಾಡುವ ಕರ್ತವ್ಯದಲ್ಲಿ ಮೂಢತ್ವ ಅಂದರೆ ತಿಳುವಳಿಕೆಯಿಲ್ಲದೆ ನಿರೂಪ್ಯ – ವಿಚಾರ ಮಾಡಿ ತಮ್ – ಆ ಬಾಲಕನಿಗೆ ಪ್ರಪಕ್ವಂ – ಪಕ್ವವಾದ ಕುಲಿತ್ಥಕುಲಂ – ಹುರುಳಿಯನ್ನು ಪ್ರಭೋಜಯತ್ – ಉಣ್ಣಿಸಿದಳು.

ಯಾವ ತಾಯಿಯು ಮಗುವಿಗೆ ಉಷ್ಣವಾಗುತ್ತದೆ ಎಂದು ತನ್ನ ಸ್ತನ್ಯಪಾನ ಮತ್ತು ಶೀತಪದಾರ್ಥಗಳನ್ನು ತಿನ್ನಿಸುತ್ತಿದ್ದಳೋ ಕುಡಿಸುತ್ತಿದ್ದಳೋ ಆ ಮಗುವಿಗೆ ಆ ಕನ್ಯೆಯು ಹಸು-ಎತ್ತಿಗಾಗಿ ಇಟ್ಟಿದ್ದ ಉಷ್ಣದಾಯಕ ಹುರುಳಿಯನ್ನು ತಿನ್ನಿಸಿದಳು.

 

ನೂನಂಪಿಪಾಸುರತಿರೋದಿತಿ ಹಂತಬಾಲೋ                                                            ದಿಙ್ ಮಾಂ ದಯಾ ವಿರಹಿತಾಂ ಪರಕೃತ್ಯಸಕ್ತಾಂ !
ಇತ್ಯಾಕುಲಾಗೃಹಮುಪೇತ್ಯ ತದಾ ಪ್ರಸನ್ನಂ                                                ಪೂರ್ಣೋದರಂ ಸುತಮವೈಕ್ಷತ ವಿಪ್ರಪತ್ನೀ ! 39 !

ತದಾ – ಆಗ ವಿಪ್ರಪತ್ನೀ – ಮಧ್ಯಗೇಹಭಟ್ಟರ ಪತ್ನಿ ವೇದವತಿಯು ಬಾಲ: – ಬಾಲಕನು ಪಿಪಾಸು: – ಸ್ತನ್ಯಪಾನ ಮಾಡಲು ಅತಿರೋದಿತಿ – ಆಳುತ್ತಿರಬಹುದೆಂದು ನೂನಂ – ನಿಶ್ಚಯಿಸಿ, ದಯಾ ವಿರಹಿತಾಂ – ಮಗುವಿನಲ್ಲಿ ದಯೆರಹಿತವಾಗಿ ಪರಕೃತ್ಯಸಕ್ತಾಂ – ಬೇರೆಯವರ ಕಾರ್ಯದಲ್ಲಿ ಆಸಕ್ತಳಾಗಿದ್ದ ಮಾಂ – ನನ್ನನ್ನು ಜನ: ಧಿಕ್ ಇತ್ದಂ – ಧಿಕ್ಕರಿಸಲಿ ಎಂದು ಅಕುಲಾ ಸತಿ – ವ್ಯಥೆಗೊಳಗಾಗಿ ಗೃಹಂ ಉಪೇತ್ಯ – ಮನೆಯನ್ನು ತಲುಪಿ ಪ್ರಸನ್ನಂ ಪೂರ್ಣೋದರಂ – ಹೊಟ್ಟೆ ತುಂಬಿದ ಸಂತುಷ್ಟನಾದ ಸುತಂ – ಮಗನ ಅವೈಕ್ಷತ – ನೋಡಿದಳು.

ಬೇರೆಯವರ ಮನೆಯ ಕಾರ್ಯದಲ್ಲಿ ಆಸಕ್ತಳಾಗಿ ಸ್ತನ್ಯಪಾನ ಮಾಡುವ ತನ್ನ ಮಗನನ್ನು ನಿರ್ಲಕ್ಷಿಸಿದೆನೆಂದು ವ್ಯಥೆಯಿಂದ ತನ್ನನ್ನು ತಾನೇ ನಿಂದಿಸಿ ಕೊಳ್ಳುತ್ತಾ ಮನೆಗೆ ಬಂದ ವೇದವತಿಯು ಹೊಟ್ಟೆ ತುಂಬಿ ಸಂತುಷ್ಟನಾದ ಮಗುವನ್ನು ನೋಡಿದಳು

ಪೃಷ್ಟ್ವಾsವಗಮ್ಯ ಸಕಲಂ ಚ ತತ: ಪ್ರವೃತ್ತಂ                                                      ಯೂನಾಂ ಚ ದುಸ್ಸಹಮಿದಂ ಶಿಶುನೋಪಭುಕ್ತಂ !
ಇತ್ಥಂ ವಿಚಿಂತ್ಯ ತನಯಾಂ ಬಹುಭರ್ತ್ಸಯಂತ್ಯಾ                                                    ಭೀತಂ ತಯೋತ ಕುಪಿತಂ ಮನಸಾsನುತಪ್ತಂ ! ೪೦ !

ತತ: – ನಂತರ ಪ್ರವೃತ್ತಂ – ನಡೆದ ಸಕಲಂ ಚ – ಎಲ್ಲಾ ವಿವರವನ್ನು ಪೃಷ್ಟ್ವಾ – ಆ ಕನ್ಯೆಯನ್ನು ಕೇಳಿ ಅವಗಮ್ಯ – ತಿಳಿದುಕೊಂಡು ಶಿಶುನಾ – ಮಗುವಿನಿಂದ ಉಪಭುಕ್ತಂ – ತಿನ್ನಲ್ಪಟ್ಟ ಇದಂ – ಈ ಹುರಳೀಕಾಳು ಯೂನಾಂ ಚ – ಯುವಕರಿಗೂ ದುಸ್ಸಹಂ – ಸಹಿಸಲಸಾಧ್ಯ ಇತ್ಥಂ – ಹೀಗೆ ವಿಚಿಂತ್ಯ – ಆಲೋಚಿಸಿ ತನಯಾಂ – ಮಗಳನ್ನು ಕುಪಿತಂ – ಕೋಪಗೊಂಡು ಬಹುಭರ್ತ್ಸಯಂತ್ಯಾ – ಬಹಳವಾಗಿ ಗದರಿಸಿ ತಯಾ – ಆ ತಾಯಿಯು ಭೀತಂ – ಅಪಾಯವನ್ನು ಶಂಕಿಸಿದಳು. ಮನಸಾ – ಮನಸ್ಸಿನಲ್ಲಿ ಅನುತಪ್ತಂ ಉತ – ವ್ಯಥೆಯನ್ನು ಹೊಂದಿದಳು.

ಮನೆಗೆ ಬಂದು ಸಂತುಷ್ಟನಾದ ಮಗುವನ್ನು ನೋಡಿದ ವೇದವತಿಯು ಮಗಳನ್ನು ನಡೆದ ಎಲ್ಲವನ್ನೂ ವಿಚಾರಿಸಿ ತಿಳಿದುಕೊಂಡು, ಯುವಕರಿಗೇ ಜೀರ್ಣವಾಗದ ಈ ಹುರಳೀಯನ್ನು ಮಗುವಿಗೆ ತಿನ್ನಿಸಿದ ಮಗಳು ಮೇಲೆ ಕೋಪದಿಂದ ಗದರಿಸಿ ತಾನೂ ತನ್ನ ಉಪೇಕ್ಷೆಯಿಂದ ಹೀಗಾಯಿತು ಎಂದು ವ್ಯಥೆಗೊಳಗಾದಳು

ಆರೋಗ್ಯಶಾಲಿನಿ ಪುರೇವ ತದಾsಪಿ ಪುತ್ರೇ
ವಿಸ್ಮೇರತಾಮುಪಜಗಾಮ ಜನನ್ಯಮುಷ್ಯ|
ಯಸ್ಯ ತ್ರಿಲೋಕಜನನೀ ಜನನೀ ವಿಷೇsಪಿ !
ಪೀತೇ ನ ವಿಸ್ಮಯಮವಾಪ ಸಮಸ್ತಶಕ್ತೇ: | 41 |ಪದಚ್ಛೇದ: –

ಆರೋಗ್ಯಶಾಲಿನಿ ಪುರಾ ಇವ ತದಾ ಅಪಿ ಪುತ್ರೇ ವಿಸ್ಮೇರತಾಂ ಉಪಜಗಾಮ ಜನನೀ ಅಮುಷ್ಯ ಯಸ್ಯ ತ್ರಿಲೋಕ ಜನನೀ ಜನನೀ ವಿಷೇ ಅಪಿ ನ ವಿಸ್ಮಯಂ ಅವಾಪ ಸಮಸ್ತ ಶಕ್ತೇ:

ಪುತ್ರೇ – ಪುತ್ರನು ತದಾsಪಿ – ಹುರಳಿಯ ಭಕ್ಷಣದ ನಂತರವೂ ಪುರೇವ – ಮುಂಚಿನಂತೆಯೇ ಆರೋಗ್ಯಶಾಲಿನಿ ಸತಿ – ಆರೋಗ್ಯದಲ್ಲಿ ಯಾವುದೇ ತೊಂದರೆಯಾಗಿಲ್ಲದೆ ಇರಲು ಅಮುಷ್ಯ – ಬಾಲಕನ ಜನನೀ – ತಾಯಿಯು ವಿಸ್ಮೇರತಾಂ – ವಿಸ್ಮಯವನ್ನು ಉಪಜಗಾಮ – ಹೊಂದಿದಳು. ಯಸ್ಯ – ಯಾವ ಸಮಸ್ತ ಶಕ್ತೇ: – ಸರ್ವ ಸಾಮರ್ಥ್ಯ ಹೊಂದಿದ ವಾಯುದೇವರ ಜನನೀ – ತಾಯಿಯಾದ ತ್ರಿಲೋಕ ಜನನೀ – ಮೂರು ಲೋಕಕ್ಕೂ ತಾಯಿಯಾದ ಲಕ್ಷ್ಮೀದೇವಿಯು ವಿಷೇ – ಸಮುದ್ರಮಥನ ಕಾಲದಲ್ಲಿ ಕಾಲಕೂಟವಿಷವು ವಾಯುನಾ – ವಾಯುದೇವರಿಂದ ಪೀತೇsಪಿ – ಪಾನ ಮಾಡಲ್ಪಟ್ಟರೂ ವಿಸ್ಮಯಂ – ಆಶ್ಚರ್ಯವನ್ನು ನ ಅವಾಪ – ಲಕ್ಷ್ಮಿ ದೇವಿಯು ಹೊಂದಲಿಲ್ಲ.

ತಾತ್ಪರ್ಯ: – ಹುರಳಿಯ ತಿಂದ ನಂತರವೂ ಮುಂಚಿನಂತೆ ಆರೋಗ್ಯವಾಗಿರುವ ಬಾಲಕನ ಕಂಡು ತಾಯಿ ಸೋಜಿಗಪಟ್ಟರೆ, ಶ್ರುತ್ಯುಕ್ತರೀತ್ಯಾ ಸಮುದ್ರಮಥನ ಕಾಲದಲ್ಲಿ ಕಾಲಕೂಟ ವಿಷವನ್ನು ಈ ಬಾಲಕನ ಮೂಲರೂಪವಾದ ವಾಯುದೇವರು ಪಾನ ಮಾಡಿದ್ದರೂ, ಸಮಸ್ತ ಲೋಕಕ್ಕೂ, ವಾಯುದೇವರಿಗೂ ತಾಯಿಯಾದ ಲಕ್ಷ್ಮೀದೇವಿಯು ಆಶ್ಚರ್ಯಪಡಲಿಲ್ಲ .

ಸ್ತನ್ಯಂ ಮುಹು: ಕಿಲ ದದೌ ಜನನೀ ಗೃಹೀತ್ವಾ
ಕ್ಷೇಮಾಯ ತಂ ಕಿಲ ದಧಜ್ಜನಕೋ ಜಜಾಪ |
ಅನ್ಯೋ ಜನೋSಪಿ ಕಿಲ ಲಾಲಯತಿ ಸ್ಮ ಕಿಂತು

ಸರ್ವೋSಪಿ ತನ್ಮುಖ ಸುಹಾಸರಸಾಯನೋತ್ಕ: | 42 |

ಪದಚ್ಛೇದ:. ಸ್ತನ್ಯಂ ಮುಹು: ಕಿಲ ದದೌ ಜನನೀ ಗೃಹೀತ್ವಾ ಕ್ಷೇಮಾಯ ತಂ ಕಿಲ ದಧತ್ ಜನಕ: ಜಜಾಪ ಅನ್ಯ: ಜನ: ಅಪಿ ಕಿಲ ಲಾಲಯತಿ ಸ್ಮ ಕಿಂತು ಸರ್ವ: ಅಪಿ ತನ್ಮುಖ ಸುಹಾಸ ರಸಾಯನ ಉತ್ಕ: ಅಭವತ್ .

ಜನನೀ – ತಾಯಿ ವೇದವತಿಯು ತಮ್ – ಆ ಬಾಲಕ ವಾಸುದೇವನನ್ನು ಗೃಹೀತ್ವಾ – ಹಿಡಿದುಕೊಂಡು ( ಎತ್ತಿಕೊಂಡು) ಮುಹು: ಮತ್ತೆ ಮತ್ತೆ ಸ್ತನ್ಯಂ – ಸ್ತನ್ಯಪಾನ ದದೌ – ನೀಡಿದಳು (ಮಾಡಿಸಿದಳು). ತಥಾ – ಹಾಗೆಯೇ ಜನಕ: ತಂದೆ ಮಧ್ಯಗೇಹಭಟ್ಟರು ತಂ – ಆ ಬಾಲಕನನ್ನು ದಧತ್ ಸನ್ – ಸ್ವೀಕಾರ ಮಾಡಿ ಕ್ಷೇಮಾಯ – ಬಾಲಕನ ಕ್ಷೇಮಕ್ಕಾಗಿ ಜಜಾಪ – ಜಪತಪಾದಿಗಳ ಮಾಡಿದರು. ಅನ್ಯ: ಬೇರೆ ಜನೋsಪಿ ಜನರೂ ತಂ – ಆ ಬಾಲಕನನ್ನು ಲಾಲಯತಿ ಸ್ಮ – ಲಾಲನೆ ಮಾಡಿದರು. ಕಿಂತು – ಮತ್ತೇನೆಂದರೆ ಸರ್ವೋsಪಿ – ಸಮಸ್ತ ಜನರೂ ತನ್ಮುಖ – ಆ ಬಾಲಕನ ಮುಖದಲ್ಲಿ ಇರುವ ಸುಹಾಸ – ಮಂದಹಾಸದ ರಸಾಯನ – ಅಮೃತದಲ್ಲಿ ಉತ್ಕ: ಉತ್ಸಾಹವುಳ್ಳವರು ಆದರು.

ತಾತ್ಪರ್ಯ:. ತಾಯಿಯು ಸ್ತನ್ಯಪಾನ ಮಾಡಿ ಹೊಟ್ಟೆ ತುಂಬಿಸಿದರೆ, ತಂದೆಯು ಮಗುವಿನ ಕ್ಷೇಮಕ್ಕಾಗಿ ರೋಗನಿವಾರಕ ಮಂತ್ರ ಜಪ ಮಾಡಿದರು. ಬೇರೆ ಜನರೂ ಮಗುವಿನ ಮಂದಹಾಸದಿಂದ ಹರ್ಷಿತರಾದರು.

ದೇವಾದಿಸದ್ಭಿರನು ಪಾಲಿತಯಾssದರೇಣ
ದೇವ್ಯಾssತ್ಮನೇವ ವಿಲಸತ್ಪದಯಾ ನಿತಾಂತಮ್ !
ಅವ್ಯಕ್ತಯಾ ಪ್ರಥಮಥೋ ವದನೇSಸ್ಯ ವಾಣ್ಯಾ
ಶಾಲೀನಯೇವ ಭುವನಾರ್ಚಿತಯಾ ವಿಜಹ್ರೇ | 43 |ಪದಚ್ಛೇದ:
ದೇವಾದಿ ಸದ್ಭಿ: ಅನುಪಾಲಿತಯಾ ಆದರೇಣ ದೇವ್ಯಾತ್ಮನಾ ಇವ ವಿಲಸತ್ ಪದಯಾ ನಿತಾಂತಂ | ಅವ್ಯಕ್ತಯಾ ಪ್ರಥಮತಃ ವದನೇ ಅಸ್ಯ ವಾಣ್ಯಾ ಶಾಲೀನಯಾ ಇವ ಭುವನ ಅರ್ಚಿತಯಾ ವಿಜಹ್ರೇ ||

ಅಸ್ಯ – ಬಾಲಕ ವಾಸುದೇವನ ವದನೇ – ವದನದಲ್ಲಿ (ಸರಸ್ವತಿಯು ನೆಲೆಸಿರುವ ಮುಖಾರವಿಂದದಲ್ಲಿ ) ನಿತಾಂತಂ – ಅತ್ಯಂತ ದೇವಾದಿ – ದೇವತೆಗಳಾದಿಯಾಗಿ ಸದ್ಭಿ: – ಸಜ್ಜನರಿಂದ ಆದರೇಣ – ಭಕ್ತಿಯಿಂದ ಅನುಪಾಲಿತಯಾ – ನಿರೀಕ್ಷಿಸುವ ವಿಲಸತ್ – ವಿರಾಜಮಾನವಾದ ಪದಯಾ – ವರ್ಣಾತ್ಮಕ ಪದಗಳುಳ್ಳ ಪ್ರಥಮತಃ – ಮೊದಲ ಅವ್ಯಕ್ತಯಾ – ಅವ್ಯಕ್ತವಾದ (ತೊದಲು ನುಡಿ) ಶಾಲೀನ ಏವ – ಅದೃಷ್ಟದಂತಿರುವ ಭುವನ ಅರ್ಚಿತಯಾ – ಜಗತ್ತಿನಲ್ಲಿ ಮಾನ್ಯಳಾದ ದೇವ್ಯಾ – ಸರಸ್ವತೀ ದೇವಿಯಿಂದ ವಿಜಹ್ರೇ – ವಿರಾಜಿಸಿತು.

ತಾತ್ಪರ್ಯ – ದೇವತೆಗಳೇ ಮೊದಲಾದ ಸಜ್ಜನರಿಂದ ಭಕ್ತಿಯಿಂದ ನಿರೀಕ್ಷಿಸುವಂತೆ ವಾಸುದೇವನ ಮುಖದಿಂದ ವಾಗಭಿಮಾನಿನಿಯಾದ ವಾಣಿ (ಸರಸ್ವತಿಯಿಂದ) ತೊದಲು ನುಡಿ ಹೊರಹೊಮ್ಮಿತು. ಲೋಕ ವಿಡಂಬನೆಗಾಗಿ ವಾಸುದೇವನು ತೊದಲು ನುಡಿಯಲ್ಲಿ ಎಲ್ಲರನ್ನೂ ಸಂತೋಷಗೊಳಿಸಿದನು.

ಪುಚ್ಛಾಂತಮಚ್ಛಮವಲಂಬ್ಯ ಕದಾಚಿದೇಷ:
ಪ್ರಾತರ್ವ್ರಜಾದ್ರ್ವಜತ ಏವ ನಿಜರ್ಷಭಸ್ಯ
ಪ್ರಾಯಾತ್ ಪ್ರಿಯಸ್ಯ ಸಹಸಾ ಸ್ವಜನೈರದೃಷ್ಟೋ
ನಾನಾವನೇಷು ಚರತಶ್ಚರತಸ್ತ್ರಣಾನಿ | 45|ಪದಚ್ಛೇದ: ಪುಚ್ಛಾಂತಂ ಅಚ್ಛಂ ಅವಲಂಬ್ಯ ಕದಾಚಿತ್ ಏಷ : ಪ್ರಾತಃ ವ್ರಜಾತ್ ವ್ರಜತ ಏವ ನಿಜರ್ಷಭಸ್ಯ ಪ್ರಾಯಾತ್ ಪ್ರಿಯಸ್ಯ ಸಹಸಾ ಸ್ವಜನೈ: ಅದೃಷ್ಟ: ನಾನಾವನೇಷು ಚರತ: ಚರತ: ತೃಣಾನಿ |

ಏಷ: ಈ ಬಾಲಕನು ಕದಾಚಿತ್ – ಒಮ್ಮೆ ಪ್ರಾತಃ – ಸೂರ್ಯೋದಯ ಕಾಲದಲ್ಲಿ ವ್ರಜಾತ್ ವ್ರಜತ: – ಮೇವಿಗಾಗಿ ಹೊರಟ ಪ್ರಿಯಸ್ಯ – ಪ್ರಿಯವಾದ ನಾನಾ ವನೇಷು – ಹಲವು ಅರಣ್ಯಗಳಲ್ಲಿ ಚರತ: – ಸಂಚರಿಸುತ್ತಾ ತೃಣಾನಿ – ಹುಲ್ಲುಗಳನ್ನು ಚರತ: ಭಕ್ಷಿಸುವ ನಿಜರ್ಷಭಸ್ಯ – ಸ್ವಕೀಯ ಎತ್ತಿನ ಅಚ್ಛಂ – ಸ್ವಚ್ಛವಾದ ಪುಚ್ಛಾಂತಂ – ಬಾಲದ ತುದಿಯನ್ನು ಅವಲಂಬ್ಯ – ಹಿಡಿದುಕೊಂಡು ಸ್ವಜನೈ: – ಸ್ವಜನರಿಂದ ಅದೃಷ್ಟ: ಸನ್ – ಕಣ್ಣಿಗೆ ಕಾಣದಂತೆ ಪ್ರಾಯಾತ್ – ಪ್ರಯಾಣಿಸಿದನು.

ತಾತ್ಪರ್ಯ :. ಒಮ್ಮೆ ಬಾಲಕ ವಾಸುದೇವನು ಸೂರ್ಯೋದಯ ಕಾಲದಲ್ಲಿ ಮೇವಿಗೋಸ್ಕರ ಕೊಟ್ಟಿಗೆಯಿಂದ ಹೊರಟ ತಮ್ಮದೇ ಎತ್ತಿನ ಸ್ವಚ್ಛವಾದ ಬಾಲವನ್ನು ಹಿಡಿದು ಹೊರಟನು. ಅದನ್ನು ತಮ್ಮ ಮನೆಯ ಜನರಾರೂ ಗಮನಿಸಲಿಲ್ಲ. ಹಗಲೆಲ್ಲ ಸಂಚರಿಸಿ ಸಂಜೆಯ ಹೊತ್ತಿಗೆ ಎತ್ತಿನೊಂದಿಗೆ ಮನೆಗೆ ಹಿಂತಿರುಗಿದ.

ಉತ್ತುಂಗಶೃಂಗಲಸಿತಸ್ಯ ಮಹಿಷ್ಠಮೂರ್ತೇ:
ಪಾದಾವೃತಾವನಿತಲಸ್ಯ ಸುರಂಧ್ರಕಸ್ಯ |
ಆಶ್ರಿತ್ಯ ತಸ್ಯ ಶುಶುಭೇsವಯವೈಕದೇಶಂ
ಬಾಲೋ ದಿವಾಕರ ಇವೋದಯಪರ್ವತಸ್ಯ | 46 |ಪದಚ್ಛೇದ:
ಉತ್ತುಂಗ ಶೃಂಗ ಲಸಿತಸ್ಯ ಮಹಿಷ್ಠ ಮೂರ್ತೇ: ಪಾದ ಆವೃತ ಅವನಿತಲಸ್ಯ ಸುರಂಧ್ರಕಸ್ಯ ಆಶ್ರಿತ್ಯ ತಸ್ಯ ಶುಶುಭೇ ಅವಯವ ಏಕದೇಶಂ ಬಾಲ: ದಿವಾಕರ: ಇವ ಉದಯ ಪರ್ವತಸ್ಯ|

ಉತ್ತುಂಗ ಶೃಂಗ ಲಸಿತಸ್ಯ – ಎತ್ತರದ ಶಿಖರಗಳಿಂದ ವಿರಾಜಮಾನವಾದ ಮಹಿಷ್ಠ – ವಿಸ್ತೀರ್ಣವಾದ ಮೂರ್ತೇ: – ಆಕಾರವುಳ್ಳ ಪಾದ ಆವೃತ ಅವನಿತಲಸ್ಯ – ತನ್ನ ಪಾದದಲ್ಲಿ ಪರ್ವತಗಳಿಂದ ಆಕ್ರಾಂತವಾದ ಭೂತಲವುಳ್ಳ ಸುರಂಧ್ರಕಸ್ಯ – ಸಮೀಚೀನವಾದ ಗಹ್ವರಗಳುಳ್ಳ ಉದಯಪರ್ವತಸ್ಯ – ಮೇರು ಪರ್ವತದ ಅವಯವ – ಶಿಖರದ ಏಕದೇಶಂ – ಒಂದು ಭಾಗವನ್ನು ಆಶ್ರಿತ್ಯ – ಆಶ್ರಯಿಸಿ ಯಥಾ – ಹೇಗೆ ಶೋಭತೇ – ಶೋಭಿಸುತ್ತದೆಯೋ ತಥಾ – ಹಾಗೇ ಶುಶುಭೇ ವಾಸುದೇವ ಶೋಭಿಸಿದನು.

ಅಥವಾ

ಬಾಲ: – ಬಾಲಕ ವಾಸುದೇವನು ಉತ್ತುಂಗ – ಎತ್ತರವಾದ ಶೃಂಗ – ಕೋಡುಗಳಿಂದ ಲಸಿತಸ್ಯ – ಕೂಡಿರುವ ಪಾದ ಆವೃತ ಅವನಿತಲಸ್ಯ – ಪಾದಗಳಿಂದ ಆವೃತ ಭೂತಲವುಳ್ಳ ಮಹಿಷ್ಠ – ದೊಡ್ಡದಾದ ಮೂರ್ತೇ: – ಆಕಾರವುಳ್ಳ ಸುರಂಧ್ರಕಸ್ಯ – ಸಮೀಚೀನ ಛಿದ್ರಗಳುಳ್ಳ ತಸ್ಯ – ಆ ವೃಷಭದ ಅವಯವ – ಪುಚ್ಛ ಅವಯವ (ಬಾಲದ) ಏಕದೇಶಂ – ಒಂದು ಭಾಗವನ್ನು ಆಶ್ರಿತ್ಯ – ಆಶ್ರಯಿಸಿ ದಿವಾಕರ: ಇವ – ಸೂರ್ಯನಂತೆ ಶುಶುಭೇ – ಶೋಭಿಸಿದನು.

ತಾತ್ಪರ್ಯ: ಬಾಲಕ ವಾಸುದೇವನು ಎತ್ತಿನ ಬಾಲವನ್ನು ಹಿಡಿದು ಹೊರಟಿದ್ದನ್ನು ಉದಯಿಸುತ್ತಿರುವ ಸೂರ್ಯನಂತೆ ಶೋಭಿಸಿದನು. ಎತ್ತಿಗೆ ಎತ್ತರದ ಕೋಡುಗಳಿದ್ದರೆ ಮೇರು ಪರ್ವತಕ್ಕೆ ಎತ್ತರವಾದ ಶಿಖರವಿರುತ್ತದೆ. ಎತ್ತು ತನ್ನ ನಾಲ್ಕು ಪಾದಗಳಿಂದ ಭೂಮಿಯಲ್ಲಿ ಆವೃತವಾಗಿದ್ದರೆ, ಮೇರು ಪರ್ವತ ಸುತ್ತಲೂ ಪರ್ವತಗಳಿಂದ ಆಕ್ರಮಿತ ಭೂಪ್ರದೇಶವಿರುತ್ತದೆ.

ಲೀಲಾಂ ಕರೋತಿ ನು ಗೃಹಾಂತರಗೋ ನು ಬಾಲ:
ಕೂಪಾಂತರೇ ನು ಪತಿತ: ಪ್ರಕೃತಿಸ್ವತಂತ್ರ:|
ಇತ್ಥಂ ವಿಚಿಂತ್ಯ ಸ ಮುಹು: ಸ್ವ ಜನೋ ವಿಮೃಗ್ಯ
ಹಂತಾನವೇಕ್ಷ್ಯ ತನಯಂ ಹೃದಿ ತಾಪಮಾನ | 47 |ಪದಚ್ಛೇದ:
ಲೀಲಾಂ ಕರೋತಿ ನು ಗೃಹಾಂತರಗ: ನು ಬಾಲ ಕೂಪಾಂತರೇ ನು ಪತಿತ: ಪ್ರಕೃತಿ ಸ್ವತಂತ್ರ: ಇತ್ಥಂ ವಿಚಿಂತ್ಯ ಸ: ಮುಹು: ಸ್ವಜನ ವಿಮೃಗ್ಯ ಹಂತ ಅನವೇಕ್ಷ್ಯ ತನಯಂ ಹೃದಿ ತಾಪಂ ಆಪ‌|

ಪ್ರಕೃತಿ – ಸ್ವಾಭಾವಿಕವಾಗಿ ಸ್ವತಂತ್ರ: ಸ್ವತಂತ್ರನಾದ ಬಾಲ: – ಬಾಲಕ ವಾಸುದೇವನು ಲೀಲಾಂ – ಲೀಲೆಯಿಂದ ಕರೋತಿ ನು – ಮಾಡುತ್ತಾನೋ ಏನೋ ; ಗೃಹಾಂತರಗ: ನು – ಮನೆಯೊಳಗೆಲ್ಲೋ ಇದ್ದಾನೇನೋ ; ಕೂಪಾಂತರೇ – ಬಾವಿಯಲ್ಲೇನಾದರೂ ಪತಿತೋ ನು – ಬಿದ್ದೆನೋ ಏನೋ ; ಇತ್ಥಂ – ಹೀಗೆ ತನಯಂ – ಮಗನನ್ನು ವಿಮೃಗ್ಯ – ಹುಡುಕಿ ಅನವೇಕ್ಷ್ಯ – ಸಿಗದಿರಲು, ಹಂತ – ದು:ಖಿತರಾಗಿ ಸ: – ತಂದೆತಾಯಿಗಳು ತಾಪಂ – ದು:ಖವನ್ನು ಆಪ – ಹೊಂದಿದರು.

ವಾಸುದೇವನು ಎತ್ತಿನ ಬಾಲ ಹಿಡಿದು ಹೋದ ಮೇಲೆ, ಆ ವಿಷಯವನ್ನು ತಿಳಿಯದ ಮನೆಯ ಜನರೆಲ್ಲ ಮಗುವು ಎಲ್ಲಾದರೂ ಆಟಪಾಠವಾಡುತ್ತಿದೆಯೋ ಅಥವಾ ಬಾವಿಯಲ್ಲಿ ಬಿದ್ದು ಹೋಯಿತೋ ಎಂದೆಲ್ಲಾ ಚಿಂತಿತರಾದರು.

ಬಾಲಸ್ಯ ಬಾಲ ಪರಿಲಂಬನ ಗೋಚರಂ ತದ್
ವ್ಯಶ್ವಸ್ಯತಾಪಿ ವಚನಂ ವನಗೋಚರೋಕ್ತಮ್ |
ಯತ್ ಸಾಯಮೈಕ್ಷತ ಜನ: ಶಿಶುಮಾವ್ರಜಂತಂ

ಏಕಾಬ್ಜಕಂ ವೃಷಭ ಬಾಲ ಕೃತಾವಲಂಬಂ | 48 |

ಪದಚ್ಛೇದ:
ಬಾಲಸ್ಯ ಬಾಲ ಪರಿಲಂಬನ ಗೋಚರಂ ವನ ಗೋಚರ ಉಕ್ತಮಪಿ ವಚನಂ ಯತ್ ಜನ: ಸಾಯಂ ಐಕ್ಷತ ಶಿಶುಮ್ ಆವ್ರಜಂತಂ ಏಕಾಬ್ದಕಂ ವೃಷಭ ಬಾಲ ಕೃತ ಅವಲಂಬಂ|

ಬಾಲಸ್ಯ – ಬಾಲಕನ ಬಾಲ ವೃಷಭ ಪೃಚ್ಛವನ್ನು ಪರಿಲಂಬನ – ಹಿಡಿದು ಹೊರಟಿರುವ ಗೋಚರಂ – ವಿಷಯವನ್ನು ವನ ಗೋಚರ – ಕಾಡಿನಲ್ಲಿ ಗೋ ಮೇಯಿಸುವನಿಂದ ವಚನಂ – ಮಾತನ್ನು ಯತ್ – ಯಾವಾಗ ಜನ: – ಮಧ್ಯಗೇಹ ಭಟ್ಟ ಕುಟುಂಬದವರು ಸಾಯಂ – ಸಂಜೆ ವೃಷಭ ಬಾಲ – ಎತ್ತಿನ ಬಾಲ ಕೃತ ಅವಲಂಬನಂ – ಹಿಡಿಯಲ್ಪಟ್ಟ ಆವ್ರಜಂತಂ – ಮನೆಗೆ ತಿರುಗಿ ಬರುತ್ತಿರುವ ಏಕಾಬ್ದಕಂ – ಒಂದು ವರ್ಷದ ಶಿಶುಂ – ಬಾಲಕನನ್ನು ತತ್ ವ್ಯಶ್ವಸ್ಯತ – ಕಂಡು ನಂಬಿದರು.

ಮಗನಿಗಾಗಿ ಹುಡುಕಿ ಪರಿತಪಿಸುತ್ತಿದ್ದ ತಂದೆ ತಾಯಿಗಳಿಗೆ ಕಾಡಿನಲ್ಲಿ ಗೋಪಾಲನೆ ಮಾಡುವನಿಂದ “ನಾನು ಮಗುವನ್ನು ಕಂಡೆ” ಎಂಬ ಮಾತು, ಬಾಲಕ ಸಂಜೆಯ ಹೊತ್ತಿಗೆ ತಿರುಗಿ ಎತ್ತಿನ ಬಾಲ ಹಿಡಿದು ಬರುತ್ತಿರುವ ಮಗನ ನೋಡಿದಾಗ, ಆ ಗೋಪಾಲಕನ ಮಾತನ್ನು ನಂಬಿದರು

Sumadhwa Seva © 2022