*ಶಿಂಶುಮಾರ ರೂಪ ಚಿಂತನಾ*
ಮಾಘ ಶುಕ್ಲ ತ್ರಯೋದಶಿ *ಶಿಂಶುಮಾರ ಜಯಂತಿ*
ಎಲ್ಲರಾಯುಷ್ಯವ ಶಿಂಶುಮಾರದೇವ
ಸಲ್ಲೀಲೆಯಿಂದ ತೊಲಗಿಸುವ |
ಒಲ್ಲೆ ನಾನಿವರ ನಿತ್ಯಮುತ್ತೈದೆಯೆಂದು
ಬಲ್ಲವರೆನ್ನ ಭಜಿಸುವರು | ೨೪ |
(“ಲಕ್ಷ್ಮೀ ಶೋಭಾನೆ ಪದ 24”)
ಶಿಂಶುಮಾರ :. ಶ + ಇಂ + ಶ + ಮಾರ
ಅರ್ಥಾತ್ – ಸುಖ ಜ್ಞಾನ ಪೂರ್ಣರೂಪ. ಯಾರು ಪರಮಾತ್ಮನ ಜ್ಞಾನಾನಂದಮಯ ಎಂದು ತಿಳಿದು ಅರ್ಚಿಸುವರೋ ಅವರ ಪಾಪಗಳನ್ನು ನಾಶಮಾಡಿ ಉದ್ಧರಿಸುವನು.
ಅಶೇಷಜಗದಾದಾರ ಶಿಂಶುಮಾರೋ ಹರಿ: ಪರ: |
ಸರ್ವೇ ಬ್ರಹ್ಮಾವಿದೋ ನತ್ವ ತಂ ಯಾಂತಿ ಪರಮಂ ಪದಂ|
ಪ್ರತಿನಿತ್ಯ ಕಲಶಪೂಜೆಯಲ್ಲಿ ಶಿಂಶುಮಾರನ ಸ್ಮರಿಸಿ ಪೂಜಿಸಬೇಕು.
ನಮೋ ಜ್ಯೋತಿರ್ಲೋಕಾಯ
ಕಾಲಾಯನಾಯಾನಿಮಿಷಾಂ |
ಪತಯೇ ಮಹಾ ಪುರುಷಾಯಾಭಿಧೀಮಹಿ |
ಕಾಲಾಯನಾ – ಎಂದರೆ ಕಾಲನಿಯಾಮಕತ್ವವನ್ನು ಗಮನದಲ್ಲಿಟ್ಟುಕೊಂಡು ಎಲ್ಲರ ಆಯುಷ್ಯಕ್ಕೂ ಶಿಂಶುಮಾರನು ನಿಯಾಮಕನೆನಿಸಿದ್ದಾನೆ.
ಭಾಗವತ ಪಂಚಮ ಸ್ಕಂಧದಲ್ಲಿ ಶಿಂಶುಮಾರನ ಕಾಲನಿಯಾಮಕ ರೂಪದ ಪ್ರಸ್ಥಾಪವಿದೆ. ಶಿಂಶುಮಾರ ಅಂದರೆ ಚೇಳಿನ ಆಕಾರದ ಪರಮಾತ್ಮ ರೂಪ. ಮೈಯನ್ನು ಸುರುಳಿಯಾಗಿ ಸುತ್ತಿ ತಲೆಕೆಳಗಾಗಿ ನಿಂತು ಚೇಳಿನ ಆಕಾರದಲ್ಲಿ ಆಕಾಶದಲ್ಲಿ ಕಾಣುವ ಜ್ಯೋತಿರ್ಮಂಡಲವೇ ಶಿಂಶುಮಾರ ಚಕ್ರ. ಇದರ ಬಾಲದ ತುದಿಯಲ್ಲಿ ಧ್ರುವಮಂಡಲವಿದೆ.
ಶಿಂಶುಮಾರ ತನ್ನ ಬಾಲದ ತುದಿಯಲ್ಲಿ ಇಡೀ ವಿಶ್ವವನ್ನು ಧರಿಸಿದ್ದಾನೆ.
ಶಿಂಶುಮಾರ ಚಕ್ರದ ಉಳಿದ ಅಂಗಗಳಲ್ಲಿ ನವಗ್ರಹಗಳೂ, ಎಲ್ಲಾ 28 ದೊಡ್ಡ ನಕ್ಷತ್ರಗಳೂ ಆಶ್ರಯಿಸಿವೆ. ಉಳಿದ ನಕ್ಷತ್ರಗಳು ರೋಮದಲ್ಲಿ ಆಶ್ರಯಿಸಿವೆ. ಈ ಎಲ್ಲಾ ನಕ್ಷತ್ರಗಳ ಗ್ರಹಗಳ ಗತಿಯನ್ನು ಶಿಂಶುಮಾರ ಚಕ್ರ ನಿಯಂತ್ರಿಸುತ್ತದೆ.
ಶಿಂಶುಮಾರನ ಮಗಳು ಭ್ರಮಿ ಮತ್ತು ವಾಯುದೇವರ ಮಗಳು ಇಳಾಳನ್ನು ಧ್ರುವರಾಜ ಮದುವೆಯಾದ.
ಬ್ರಹ್ಮಾದಿ ಸಕಲ ದೇವತೆಗಳ ಆಯಸ್ಸು ಅಧೀರ್ಘ ಎಂದರೆ ಶಾಶ್ವತವಲ್ಲ. ಆದ್ದರಿಂದ ಅವರ್ಯಾರೂ ತನಗೆ ಬೇಡವೆನ್ನುತ್ತಾಳೆ ಲಕ್ಷ್ಮೀ. ಶ್ರೀಹರಿ ಮತ್ತು ಮಹಾಲಕ್ಷ್ಮಿ ಇಬ್ಬರೂ ಅನಾದಿನಿತ್ಯರು, ನಿತ್ಯ ಮುಕ್ತರು, ಅವರಿಗೆ ಕಾಲಬಂಧವಿಲ್ಲ.
ಶಿಂಶುಮಾರ – ಅರ್ಧ ದೇಹ ಪುರುಷಾಕಾರ, ಅರ್ಧ ದೇಹ ಚೇಳಿನಾಕೃತಿ. ಚೇಳಿನ ಆಕಾರದ ಬಾಲ ಮೇಲಿದೆ. ಭಗವಂತ ಮುಖ ಕೆಳಗೆ ಮಾಡಿದ್ದಾನೆ . *ಶಿಂಶುಮಾರ* ಎಂದರೆ ಸಾಕ್ಷಾತ್ ಕಾಲಪುರುಷನಾದ ಶ್ರೀಮನ್ನಾರಾಯಣನೇ ಆಗಿದ್ದಾನೆ. ನಭೋಮಂಡಲದಲ್ಲಿ ಆಶ್ವಿನ್ಯಾದಿ ಮಹಾ ಮಂಡಲ ಕಾಣುವುದು, ಹೀಗಾಗಿ *ಶಿಂಶುಮಾರ* ಎಂದರೆ ‘ಚೇಳು’ ಎಂಬ ರೂಪದಿಂದಲೇ ಜ್ಯೋತಿರ್ಮಂಡಲ ಅಧಿಪನಾಗಿದ್ದಾನೆ. ನವಗ್ರಹಗಳು ಮತ್ತು ನಕ್ಷತ್ರ ಮಂಡಲವು ಇವನ ಅಧೀನ. ಇದು ಸಾಕ್ಷಾತ್ ಶ್ರೀ ವಿಷ್ಣುವಿನ ರೂಪ. ಚೇಳಿನ ರೂಪದ ಅವತಾರೆ. ಬಾಲದ ತುದಿಯಲ್ಲಿ ಧ್ರುವತಾರೆಗೆ ಆಶ್ರಯ ಕೊಟ್ಟಿರುವನು.
ಶಿಂಶುಮಾರ ನಭೋಮಂಡಲದಲ್ಲಿ ಅತ್ಯಂತ ಎತ್ತರದ, ಮತ್ತು ಎಲ್ಲಾ ಗ್ರಹಗಳಿಗೂ ಉನ್ನತ ಸ್ಥಾನದಲ್ಲಿದ್ದಾನೆ.
ಪ್ರತಿನಿತ್ಯ ಸಪ್ತರ್ಷಿಗಳು ಶಿಂಶುಮಾರನ ಪ್ರದಕ್ಷಿಣೆ ಮಾಡುತ್ತಾರೆ.
*ಇಂದು ರಂಗಾನಟ್ಟೂಳಿಗೆ* ಎಂಬ ದೇವರನಾಮದಲ್ಲಿ ಶ್ರೀ ವ್ಯಾಸವಿಠಲರು ಶಿಂಶುಮಾರನ ಹೀಗೆ ಸ್ಮರಿಸಿದ್ದಾರೆ….
ಮ್ಯಾಣದ ಚೇಳು ತೋರುವೆ |
ಜಾಣ ರಂಗ ಅಂಜಾನಮ್ಮಮೇಣು ಮೂವತ್ತಾರು ಲಕ್ಷ | ತಾಂ ಶಿಂಶುಮಾರಾನಮ್ಮ |8|
— ವ್ಯಾಸವಿಠ್ಠಲರು
ಎಂದೂ ಪತಿವಿಯೋಗವಿಲ್ಲದೆ ನಿತ್ಯಮುಕ್ತಳಾಗಿ ನಿತ್ಯಮುತ್ತೈದೆಯಾಗಿ ಇರುವುದರಿಂದ “ಒಲ್ಲೆ ನಾನವರ” ಎಂದು ಎಲ್ಲಾ ದೇವತೆಗಳೂ ಕಾಲಪ್ರೇರಿತರಾಗಿ ಮರಣವಿರುವುದರಿಂದ ಅವರಾರೂ ಬೇಡವೆಂದಳು.
ಬಲ್ಲವರೆನ್ನ ಭಜಿಸುವರು – ಬಲ್ಲವರು ಅಂದರೆ ಜ್ಞಾನಿಗಳು ಅರ್ಥಾತ್ ಋಷಿಮುನಿಗಳು
*ಸಂಗ್ರಹ : ನರಹರಿ ಸುಮಧ್ವ*