ತಮದ್ಭುತಂ ಬಾಲಕಮಂಬುಜೇಕ್ಷಣಂ ಚತುರ್ಭುಜಂ ಶಂಖಚಕ್ರಗದಾದ್ಯುದಾಯುಧಂ !
ಶ್ರೀವತ್ಸಲಕ್ಷ್ಮಂ ಗಲಶೋಭಿಕೌಸ್ತುಭಂ ಪೀತಾಂಬರಂ ಸಾಂದ್ರಪಯೋದಸೌಭಗಂ ||
(ಭಾಗವತ)
ಶ್ರೀಹರಿ ಕೃಷ್ಣಾವತಾರದ ರೂಪದಲ್ಲೇ ಸೂಕ್ಷ್ಮವಾಗಿ ತನ್ನ ವಿಶ್ವರೂಪವನ್ನು ತೋರಿಸಿದ್ದಾನೆ. ಕೃಷ್ಣ ಅವತರಿಸಿದಾಗ ಪ್ರಾಕೃತ ಶಿಶುವಿನ ಯಾವುದೇ ಲಕ್ಷಣವೂ ಇರಲಿಲ್ಲ. ಅಪ್ರಾಕೃತ ಶರೀರಿಯಾದ ಅವನು ಹುಟ್ಟಿನಲ್ಲೇ ಚತುರ್ಭುಜ, ಶಂಖಚಕ್ರಾದಿ ಆಯುಧಗಳು, ಎದೆಯಲ್ಲಿ ಶ್ರೀವತ್ಸ ಲಾಂಛನ, ಕಂಠದಲ್ಲಿ ಕೌಸ್ತುಭ, ಪೀತಾಂಬರಧರ, ವಜ್ರ ವೈಢೂರ್ಯಾದಿ ನವರತ್ನ ಖಚಿತ ಕಿರೀಟ ಕುಂಡಲಿಗಳು, ಸರ್ವಾಯವಗಳಲ್ಲೂ ಆಭರಣಗಳು. ಇವೆಲ್ಲವ ಧರಿಸಿ ಜನಿಸಿದ ಕೃಷ್ಣ ತಾನು ಯಾರ ಮಗನೂ ಅಲ್ಲ ಎಂದು ನಿರೂಪಿಸಿದ.
ಜನಿಸಿದ ಮಗುವಿಗೆ ಶಂಖಚಕ್ರಾದಿ ಆಯುಧಗಳು, ಶ್ರೀವತ್ಸ , ಪೀತಾಂಬರ ಇದೆಲ್ಲ ತಂದೆಯ ರೇತತ್ಸಿನಿಂದ ಬರಲು ಸಾಧ್ಯವೇ. ಶ್ರೀಕೃಷ್ಣನದ್ದು ಹುಟ್ಟಲ್ಲ ಪ್ರಾದುರ್ಭಾವವೆಂದು ಇದರಿಂದಲೇ ತಿಳಿಯುತ್ತದೆ. ದೇವಕಿಯೇ ಹೇಳುತ್ತಾಳೆ “ನೀನು ನನ್ನ ಮಗನಲ್ಲ. ನೀನು ಅವ್ಯಕ್ತ, ಆದ್ಯ, ಜ್ಞಾನಸ್ವರೂಪ, ಪ್ರಾಕೃತ ಗುಣರಹಿತ, ನಿರ್ವಿಕಾರ, ಸಾಕ್ಷಾತ್ ವಿಷ್ಣುವೇ ಆಗಿರುವಿ”.
ಜಾತ: ಕಂಸವಧಾರ್ಥಾಯ ಭೂಭಾರೋತ್ತಾರಣಾಯ ಚ |
ಕೌರವಾಣಾಂ ವಿನಾಶಾಯ ದೈತ್ಯಾನಾಂ ನಿಧನಾಯ ಚ |
ಪಾಂಡವಾನಾಂ ಹಿತಾರ್ಥಾಯ ಧರ್ಮಸಂಸ್ಥಾಪನಾಯ ಚ |
ಕೃಷ್ಣ ಅವತಾರ ಮಾಡಲು ಆಯ್ದುಕೊಂಡಿದ್ದು ರಾತ್ರಿ ಕಾಲ. ಆ ಹೊತ್ತಿನಲ್ಲಿ ನಿಶಾಚರರು ಅಂದರೆ ರಾಕ್ಷಸರ ವ್ಯವಹಾರ ಕಾಲ. ಸದಾ ಅಲ್ಲಿ ಕಾವಲಿರುತ್ತಿದ್ದ ಕಂಸನ ಭೃತ್ಯರು ಆಗ ನಿದ್ರಾವಶರಾದರು. ಸೆರೆಮನೆಯ ಬಾಗಿಲುಗಳೆಲ್ಲವೂ ಬೀಗವಿದ್ದರೂ ಇದ್ದಕ್ಕಿದ್ದಂತೆ ತೆರೆದವು.
ಕೃಷ್ಣ ಪ್ರಾದುರ್ಭಾವವಾದ ಸ್ವಲ್ಪ ಸಮಯದ ನಂತರ ವಸುದೇವನಿಗೆ ಹೇಳುತ್ತಾನೆ ” ನೀನು ನನ್ನನ್ನು ನಂದಗೋಕುಲಕ್ಕೆ ಕರೆದುಕೊಂಡು ಹೋಗಿ, ಅಲ್ಲೇ ನನ್ನನ್ನು ಬಿಟ್ಟು ಅಲ್ಲಿ ಯಶೋದೆಯಲ್ಲಿ ಜನಿಸಿರುವ ದುರ್ಗೆಯನ್ನು ಇಲ್ಲಿಗೆ ಕರೆದುತಾ”
ಅದರಂತೆ ವಸುದೇವನು ಬಾಲಕೃಷ್ಣನನ್ನು ಕರೆದುಕೊಂಡು ಹೊರಟಾಗ ಕಂಸನ ದ್ವಾರಪಾಲಕರು ಬಾಹ್ಯಪ್ರಜ್ಞೆಯೇ ಇಲ್ಲದೆ ನಿದ್ರಾಪರವಶರಾಗಿರಲು, ಕಬ್ಬಿಣದ ಸರಪಳಿಗಳು ಕಳಚಿ, ಬಾಗಿಲುಗಳೆಲ್ಲ ತಮ್ಮಷ್ಟಕ್ಕೆ ತಾವೇ ತೆರೆಯಲು, ಮಳೆಯಲ್ಲಿ ಆದಿಶೇಷನು ತನ್ನ ಹೆಡೆಗಳಿಂದ ಛತ್ರಿಯಂತೆ ಬರಲು, ಯಮುನೆಯು ದಾರಿಮಾಡಿಕೊಡಲು, ನಂದಗೋಕುಲ ತಲುಪಿ ಶ್ರೀ ಕೃಷ್ಣನ ಅಲ್ಲಿ ಯಶೋದೆಯ ಬಳಿ ಮಲಗಿಸಿ, ಅಲ್ಲಿ ಅವತರಿಸಿದ್ದ ದುರ್ಗೆಯನ್ನು ಎತ್ತಿಕೊಂಡು ಪುನಃ: ಮಥುರೆಗೆ ಬಂದು ಕಾರಾಗೃಹಕ್ಕೆ ತಲುಪಿ ದೇವಕಿಯ ಕೈಲಿ ಆ ಹೆಣ್ಣು ಮಗುವನ್ನು ಒಪ್ಪಿಸಿದನು.
ಇಲ್ಲಿ ಕಂಸನಿಗೆ ಹೆದರಿ ಕೃಷ್ಣ ನಂದಗೋಕುಲಕ್ಕೆ ಹೊರಟನೇ ? ವಾದಿರಾಜರು ತಮ್ಮ ರುಕ್ಮಿಣೀ ವಿಜಯದಲ್ಲಿ ನಿರೂಪಿಸುತ್ತಾರೆ. ಕೃಷ್ಣ ಅವತರಿಸಿದ ವಿಷಯ ಕಂಸನಿಗೆ ತಲುಪಿದಾಗ ಅವನು ಕೃಷ್ಣನನ್ನು ಕೊಲ್ಲಲು ಬಂದು ತಾನೇ ಹತನಾಗುವನು. ಆದರೆ ಕೃಷ್ಣಾವತಾರದ ಹಿನ್ನೆಲೆ ಕೇವಲ ಕಂಸಸಂಹಾರಕ್ಕಷ್ಟೇ ಸೀಮಿತವಲ್ಲ. “ವಿನಾಶಾಯ ಚ ದುಷ್ಕೃತಾಂ” ಎಂಬಂತೆ ಎಲ್ಲಾ ದುಷ್ಟರ ಸಂಹಾರ. ಕಂಸನ ಭೃತ್ಯ ದುಷ್ಟರೆಲ್ಲರ ಸಂಹಾರ. ಇದರಿಂದ ಕಂಸನಿಗೂ ತನ್ನ ಬಂಧು ಬಾಂಧವರ ಸಾವನ್ನು ನೋಡುವ ಅವಕಾಶ. ಮತ್ತು ಅಲ್ಲಿ ಅವತರಿಸಿರುವ ದುರ್ಗೆಯನ್ನು ನೋಡಲು ಹೊರಟನು.
ಪೂತನಾ ಜೀವಿತಾಹಾರೀ – ಶ್ರೀಕೃಷ್ಣ ಮೊದಲು ಸಂಹರಿಸಿದ್ದು ಹೆಣ್ಣನ್ನೇ. ರಾಮಾವತಾರದಲ್ಲೂ ಮೊದಲು ಸಂಹರಿಸಿದ್ದು ಹೆಣ್ಣನ್ನೇ.
- ವಸುದೇವಸುತಂ ದೇವಂ ಕಂಸಚಾಣೂರಮರ್ದನಮ್ |
- ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಮ್ !!
- ವಸುದೇವನ ಮಗನಾಗಿಯೂ, ದೇವತಾ ಸ್ವರೂಪನಾಗಿಯೂ, ಕಂಸ ಚಾಣೂರ ಮೊದಲಾದವರನ್ನು ಕೊಂದವನಾಗಿಯೂ, ದೇವಕಿಗೆ ಪರಮಾನಂದವನ್ನೂ ನೀಡುವ, ಜಗತ್ತಿಗೆಲ್ಲಾ ಧರ್ಮವನ್ನು ತಿಳಿಸುವವನಾಗಿಯೂ, ಜಗದ್ಗುರುವೂ ಆಗಿರುವ ಕೃಷ್ಣನಿಗೆ ವಂದಿಸುತ್ತೇನೆ..
ಕೃಷ್ಣಾರ್ಪಣಮಸ್ತು