*ಕೃಷ್ಣಂ ವಂದೇ ಜಗದ್ಗರುಂ*
ಶ್ರಾವಣ ಬಹುಳ ಅಷ್ಟಮಿ ರೋಹಿಣಿ ನಕ್ಷತ್ರದಲ್ಲಿ ಕೃಷ್ಣ ಜನ್ಮಾಷ್ಟಮಿ. ಕೃಷ್ಣ ಪರಮಾತ್ಮ ಅವತಾರ ಮಾಡಿದ ದಿನ.
ಶ್ರೀ ಕೃಷ್ಣ ಚಾರಿತ್ರ್ಯ ಮಂಜರಿ – ರಾಘವೇಂದ್ರ ಸ್ವಾಮಿಗಳ ಪ್ರಸಿದ್ಧ ಕೃತಿ. ಕೃಷ್ಣ ಪರಮಾತ್ಮನ ಸಂಪೂರ್ಣ ಚರಿತ್ರೆಯನ್ನು ರಾಯರು ಸಂಕ್ಷಿಪ್ತವಾಗಿ ತಿಳಿಸಿದ್ದಾರೆ
ಭೂಭಾರಹರಣಕ್ಕಾಗಿ ಭೂದೇವಿಯಿಂದ ಪ್ರಾರ್ಥಿತನಾಗಿ ದೇವಕಿ ವಸುದೇವ ದಂಪತಿಗಳ ಗರ್ಭಸಂಜಾತನಾಗಿ ಜನಿಸಿ, *ದೇವಕಿ ನಂದನ* , *ವಾಸುದೇವ* ಎನಿಸಿ, ನಂದಗೋಕುಲದಲ್ಲಿ ಬೆಳೆದು, ಯಶೋಧೆಗೆ ಬಾಲಲೀಲೆಗಳ ತೋರಿಸಿ, ಸ್ತನ್ಯಪಾನದಲ್ಲಿ ವಿಷ ಉಣಿಸಲು ಬಂದ ಪೂತನಿಯ ಕೊಂದು, *ಪೂತನಾ ಜೀವಿತ ಹರ* ಬಂಡಿರೂಪದಿ ಬಂದ ಶಕಟಾಸುರನ ತನ್ನ ಪುಟ್ಟ ಪಾದಸ್ಪರ್ಶದಿಂದಲೇ ಸಂಹರಿಸಿ *ಶಕಟಾಸುರ ಮುಂಜಾನೆ* ಎನಿಸಿ, ಗಾಳಿ ರೂಪದಿ ಬಂದ ತೃಣಾವರ್ತನ ನಭೋಮಂಡಲ ದಿಂದ ಬೀಳಿಸಿ ಕೊಂದನು. ಕೃಷ್ಣ ಮಣ್ಣು ತಿಂದ ಎಂಬ ಆರೋಪಕ್ಕೆ *ತಾಯಿಗೆ ಬಾಯಲ್ಲಿ ಜಗವನ್ನೇ ತೋರಿದ*ನು. *ಕರ್ಷತೀತಿ ಕೃಷ್ಣ:* ಎಂಬಂತೆ ಎಲ್ಲರನ್ನೂ ಆಕರ್ಷಿಸುತ್ತಿದ್ದರಿಂದ *ಕೃಷ್ಣ* ಎಂಬ ನಾಮಧೇಯ ಗರ್ಗ್ಯಾಚಾರ್ಯರ ಪೌರೋಹಿತ್ಯದಲ್ಲಿ ಪಡೆದನು.
ಕರುವಿನ ರೂಪದಿ ಬಂದ ವತ್ಸಾಸುರನ, ಬಕ ರೂಪದಿ ಬಂದ ಬಕಾಸುರನ, ಕತ್ತೆ ರೂಪದಿ ಬಂದ ಧೇನುಕಾಸುರನನ್ನೂ,. ಕೊಂದು, ಯಮುನೆಯಲ್ಲಿ ತನ್ನ ವಿಷದಿಂದ ಕಲುಷಿತಗೊಳಿಸಿದ್ದ ಕಾಳಿಂಗನ ಹೆಡೆಯೇರಿ ಮದಿಸಿ, ಅವನನ್ನು ರಮಣಕದ್ವೀಪಕ್ಕೆ ಕಳುಹಿದ.
ದುರ್ಗಾರಣ್ಯ ಪ್ರವೇಶಿಸಿ, ದಾವಾಗ್ನಿ ಪಾನಮಾಡಿ, ಗೋವುಗಳ ಸಂರಕ್ಷಿಸಿ, ವೇಣುಗಾನ ಮಾಡಿ ಗೋಪಿಕೆಯರ ಆನಂದಗೊಳಿಸಿದನು.
ವಸ್ತ್ರ ರಹಿತರಾಗಿ ಸ್ನಾನಗೈಯುತ್ತಿದ್ದ ಗೋಪಿಕೆಯರ ವಸ್ತ್ರ ಅಪಹರಿಸಿ, ಯಾರೂ ವಸ್ತ್ರರಹಿತ ಸ್ನಾನ ಮಾಡಬಾರದೆಂದು ನೀತಿ ತಿಳಿಸಿದ. ದೇವೇಂದ್ರನ ಪೂಜೆ ಮಾಡದೆ ಗೋವರ್ಧನ ಗಿರಿ ಪೂಜಿಸಿದರಿಂದ ಕೋಪಗೊಂಡ ಸ್ವರ್ಗಾಧಿಪ ಸುರಿಸಿದ ಭಾರೀ ಮಳೆಯಿಂದ ಜನ, ಗೋವುಗಳ ಸಂರಕ್ಷಿಸಲು ಗೋವರ್ಧನಗಿರಿ ಎತ್ತಿದ. ಪಶ್ಚಾತ್ತಪ್ತ ದೇವೇಂದ್ರ ಕೃಷ್ಣನನ್ನು*ಗೋವಿಂದ* ಎಂದ.
ಕಂಸನಿಂದ ಪ್ರೇರಿತನಾಗಿ ಬಂದ ಕೇಶೀ ನಾಮಕ ದೈತ್ಯನ ಕೊಂದು *ಕೇಶವ* ಎನಿಸಿದ. ಕಂಸನ ಬಿಲ್ಲು ಹಬ್ಬಕ್ಕೆ ಆಗಮಿಸುವಾಗ ದಾರಿಯಲ್ಲಿ ಸುಗಂಧವ ನೀಡಿದ ತ್ರಿವಕ್ರೆಯ ಸುಂದರಿಯಾಗಿಸಿದ. ಅವಳಿಂದ *ವಿಶೋಕ* ಎಂಬ ಪುತ್ರನ ಪಡೆದು ಅವನು ಮುಂದೆ ಭೀಮಸೇನನ ಸಾರಥಿಯಾದನು.
ಕುವಲಯಾಪೀಡವೆಂಬ ದುಷ್ಟ ಗಜವನ್ನೂ ಅದರ ಮಾವುತನನ್ನೂ ಕೊಂದು, ಕಂಸನ ಭೃತ್ಯರು ಮುಷ್ಟಿಕಾಸುರ ಚಾಣೂರರ ಮದಿಸಿದನು. ಶಿವಧನಸ್ಸನ್ನು ತುಂಡರಿಸಿ, ಕಂಸನೊಂದಿಗೆ ಮಲ್ಲಯುದ್ಧವ ಮಾಡಿ *ಮಾವನ ಕೊಂದವ* ಮತ್ತು *ಕಂಸಾರಿ* ಎನಿಸಿದ.
ಗರ್ಗಾಚಾರ್ಯರಿಂದ ಉಪನಯನ ಸಂಸ್ಕಾರ ಪಡೆದು , ಸಾಂದೀಪಿನಾಚಾರ್ಯರಲ್ಲಿ 64 ದಿನಗಳಲ್ಲಿ 64 ವಿದ್ಯೆ ಲೋಕರೀತ್ಯಾ ಕಲಿತನು. ಗುರುದಕ್ಷಿಣೆ ರೂಪದಲ್ಲಿ ಶಂಖ ದೈತ್ಯನ ಅವನು ಅಪಹರಿಸಿದ್ದ ಗುರುಪುತ್ರನನ್ನು ತಂದೊಪ್ಪಿಸಿ, ಆ ಪಾಂಜನ್ಯ ಶಂಖವನ್ನೇ ಧರಿಸಿದನು.
ಕರವೀರಪುರದ ಸೃಗಾಲ ವಾಸುದೇವನ ಕೊಂದು, ಇಚ್ಛೆ ಮಾತ್ರದಲ್ಲಿ ಜಲಮಧ್ಯದಲ್ಲಿ ದ್ವಾರಕಾನಗರ ನಿರ್ಮಿಸಿ, ಸಮಸ್ತ ಯಾದವರನ್ನೂ ದ್ವಾರಕಾನಗರಕ್ಕೆ ಸೇರಿಸಿದನು. 23 ಬಾರಿ ಧಾಳಿ ಮಾಡಿದ ಜರಾಸಂಧನ ಅಷ್ಟೂ ಬಾರಿ ಸೋಲಿಸಿ, ಕೃಷ್ಣನ ಕೊಲ್ಲಲೆಂದು ಬಂದ ಕಾಲಯವನನ್ನು ಮುಚುಕುಂದನ ಮೂಲಕ ದಹಿಸಿದನು.
ಭೀಷ್ಮಕನ ಪುತ್ರಿ ರುಕ್ಮಿಣಿಯನ್ನು ಅಪಹರಿಸಿ ವಿವಾಹವಾಗಿ, ಸತ್ರಾಜಿತನ ಸ್ಯಮಂತಕಮಣಿಯನ್ನು ಹುಡುಕಲು ಹೋಗಿ ಜಾಂಭವಂತನ ಸೋಲಿಸಿ ಜಾಂಭವತಿಯನ್ನು ವಿವಾಹವಾಗಿ, ನಂತರ ಸತ್ರಾಜಿತನ ಪುತ್ರಿ ಸತ್ಯಭಾಮೆಯನ್ನು ವಿವಾಹವಾಗಿ, ಕಾಳಿಂದೀ, ನೀಲಾ, ಮಿತ್ರವೃಂದಾ, ಭದ್ರೆ, ಲಕ್ಷಣಾದೇವಿಯನ್ನೂ ವಿವಾಹವಾಗಿ ಅಷ್ಟಮಹಿಷಿಯರ ಪತಿಯೆನಿಸಿದನು.
ನರಕಾಸುರನ ಕೊಂದು ಅವನ ಬಳಿಯಿದ್ದ 16100 ಕನ್ಯೆಯರನ್ನೂ ವರಿಸಿದನು. ಅವನ ಅಷ್ಟೂ ಪತ್ನಿಯರಲ್ಲೂ ತಲಾ ಹತ್ತು ಗಂಡು ಒಂದು ಹೆಣ್ಣು ಮಗು ಪಡೆದನು.
ಪಾಂಡವರ ರಾಜಸೂಯ ಯಾಗದಲ್ಲಿ ಅಗ್ರಸ್ಥಾನವನ್ನು ಇತ್ತಾಗ ಶತಾಪರಾಧ ಮಾಡಿದ ಶಿಶುಪಾಲನ ಕೊಂದು, ಪಾಪಿಷ್ಟ ದುರ್ಯೋಧನ ದ್ರೌಪದಿಯ ಸೀರೆಯ ಸೆಳೆಯ ಹೋದಾಗ ಸೀರೆಯನಿತ್ತು ಸಂರಕ್ಷಿಸಿದ. ದುರ್ಯೋಧನನ ಮನೆಗೆ ಶ್ರೀಕೃಷ್ಣ ಸಂಧಾನಕ್ಕೆ ಹೋಗಿ, ಅವನು ಒಪ್ಪದಿರಲು ಮಹಾಭಾರತ ಯುದ್ಧದಲ್ಲಿ ತಾನು ಶಸ್ತ್ರವನೆತ್ತುವುದಿಲ್ಲ ಎಂದು ಶಪಥಗೈದು, ಅರ್ಜುನನ ಸಾರಥಿಯಾಗಿ ರಥವ ನಡೆಸಿ *ಪಾರ್ಥಸಾರಥಿ* ಎನಿಸಿ, ಅರ್ಜುನನಿಗೆ ಗೀತೋಪದೇಶ ನೀಡಿ *ಗೀತಾಚಾರ್ಯ* ಎನಿಸಿ, ವಿಶ್ವರೂಪ ತೋರಿಸಿ, ಅತಿರಥಮಹಾರಥರ ನಡುವೆ ಪಾಂಡವರ ಜೊತೆಗೆ ಆಯುಧವನ್ನು ಧರಿಸದೆ ನಿಂತು, ಸಹಾಯ ಹಸ್ತ ಯಾಚಿಸಿದ ದುರ್ಯೋಧನನಿಗೆ ತನ್ನ ಎಂಟಕ್ಷೌಹಿಣಿ ಸೈನ್ಯವಿತ್ತರೂ, ಪಾಂಡವರ ಗೆಲುವಿಗೆ ಮುಖ್ಯ ಕಾರಣನಾದನು.
ತನ್ನ ಅವತಾರ ಸಮಾಪ್ತಿಯನ್ನು ಮಾಡಲು ನಿರ್ಧರಿಸಿ, ಗಾಂಧಾರಿಯಿಂದ ಶಾಪ ಸ್ವೀಕರಿಸಿ, ಯಾದವೀಕಲಹದಲ್ಲಿ ಸಮಸ್ತ ಯಾದವರೂ ನಾಶವಾಗುವಂತೆ ಮಾಡಿದನು. ಇಡೀ ಮಹಾಭಾರತ ಯುದ್ಧದಲ್ಲಿ ಬಿದ್ದ ಯಾವುದೇ ಬಾಣಗಳಿಂದಲೂ ಏನೂ ಆಗಲಿಲ್ಲ, ಆದರೆ, ಒಬ್ಬ ಬೇಡನ ಬಾಣಕ್ಕೆ ತನ್ನ ಅವತಾರ ಕಾರ್ಯ ಸಮಾಪ್ತಿ ಮಾಡಿದನು.