ಮಾನಸ ಪೂಜೆಯನು ಮಾಡು

ಮಾನಸ ಪೂಜೆ

ಮಾನಸ ಪೂಜೆಯನು ಮಾಡು |
ಧ್ಯಾನ ಪೂರ್ವದಿಂದ ಕುಳಿತು | ಪ |

ಜ್ಞಾನ ಭಕುತಿಯವಿಡಿದು ಲಕುಮಿ |
ಪ್ರಾಣನಾಥನ ಪ್ರೇರಣೆಯಿಂದ |ಅ.ಪ|

ಕಾಮ ಕ್ರೋಧವ ಹಳಿದು ವಿಷದ
ಸ್ತೋಮಗಳನು ತೊರೆದು ರಜೋ
ತಾಮಸದ ಬುದ್ಧಿ ಬಿಟ್ಟು
ನೇಮನಿತ್ಯ ತೀರಿಸಿ
ಶ್ರೀಮದಾನಂದತೀರ್ಥರ
ಕೋಮಲಾಂಘ್ರಿ ಕಮಲದಲಿ
ಈ ಮನಸ್ಸು ಇಟ್ಟು
ನಿಷ್ಕಾಮದಲಿ ಬಗೆಯ ತಿಳಿದು ! ೧ |

ಹೃದಯ ಪದುಮದೊಳಗೆ ಹರಿಯ
ಪದುಮ ಪದಗಳಿಟ್ಟು ದೇಹ
ಕದಲದಂತೆ ಇದ್ದು ಜ್ಞಾನ
ಉದಿತವಾದ ದೃಷ್ಟಿಯ ||
ಹದುಳದಿಂದ ತಿರಿವಿ ಅಂತ ರವೆಲ್ಲವನು ನೋಡಿ |
ಕದವ ತೆರೆದು ಕೊಟ್ಟ ಮುದದಿ ದೃಢವ ಸಂಪಾದಿಸಿ | 2 |

ನೀಲ ರತುನದಂತೆ ಹೊಳೆವ
ಪಾಲಸಾಗರ ತನುಜೆ ಅಲ
ಮೇಲು ಮಂಗಲರಮಣನಾದ ಮೇಲುಗಿರಿಯ ತಿಮ್ಮನ |
ಲಾಲಣಿಂದ ತುತಿಸಿ ತವಕ
ಬೀಳದಲೆ ಪೂಜೆ ವಿಧಾ ಸಾಲುಗಳನು ತಿಳಿದು ವಿಶಾಲ ಬುದ್ಧಿ ಯುಕುತಿಯಿಂದ | 3 |

ವೇದ ಮಂತ್ರಗಳನು ಪೇಳಿ. ಆದಿಯಲ್ಲಿ ಪೀಠಪೂಜೆ- |
ಯಾದ ತರುವಾಯ ವಿನೋದದಿಂದಲಾವರಣ ||
ಆದರಣೆಯಾದ ಬಳಿಕ
ಮಾಧವಂಗೆ ಸಕಲ ಭೂಷ- |
ಣಾದಿಗಳನು ರಚಿಸಿ ಪುಣ್ಯ ಹಾದಿಯನು ತಪ್ಪದೆ | 4 |

ದೋಷರಾಶಿಗೆ ದ್ವೇಷನಾಗಿ ಈ ಶರೀರವ ಘಾಸಿ ಮಾಡದೆ |
ನಾಶರಹಿತನಾದ ಹರಿಯ
ಆ ಶಿರಸಾವಿಡಿದು ಪಾದ
ಲೇಸಿನಿಂದ ಭಜನೆಗೈದು. ವಾಸವಾಗುವ ಪದದಲ್ಲಿ |
ಶ್ರೀಶ ವಿಜಯವಿಠ್ಠಲರನ್ನ ದಾಸದಾಸರ ದಾಸನೆಂದು | 5 |

Sumadhwa Seva © 2022