ನಿನ್ನ ದರುಶನಕೆ ಬಂದವನಲ್ಲವೋ

ಶ್ರೀ ವಿಜಯದಾಸರ ನಿಂದಾಸ್ತುತಿ

 

ನಿನ್ನ ದರುಶನಕೆ ಬಂದವನಲ್ಲವೊ
ಪುಣ್ಯವಂತರ ದಿವ್ಯ ಚರಣ ನೋಡಲಿ ಬಂದೆ ||pa||

ಎಲ್ಲೆಲ್ಲಿ ನಿನ್ನ ವ್ಯಾಪ್ತತನವಿರಲಿಕ್ಕೆ
ಇಲ್ಲಿಗೆ ಬರುವ ಕಾರಣವಾವುದೊ
ಸೊಲ್ಲಿಗೆ ಕಂಭದಲಿ ತೋರಿದ ಮಹಾಮಹಿಮ
ಅಲ್ಲಿ ಇಲ್ಲೇನಯ್ಯ ಬಲ್ಲ ಭಜಕರಿಗೆ ||1||

ಕರೆದಾಗಲೆ ಓಡಿ ಬಂದೊದಗುವ ಸ್ವಾಮಿ
ಮರಳಿ ಗಾವುದ ಎಣಿಸಿ ಬರಲ್ಯಾತಕೊ
ನೆರೆ ನಂಬಿದವರಿಗೆ ಆವಲ್ಲಾದರೇನು
ಅರಿದವರ ಮನದೊಳಗೆ ನಿಂದಾಡುವ ಚಂದವಾ ||2||

ಕಠಿನವೊ ನಿನ್ನ ಭಕುತರನ ನೋಡುವ ಲಾಭ
ಸಟೆಯಲ್ಲಾ ವೇದಗಳು ಸಾರುತಿವಕೊ
ವಟು ಮೊದಲಾದ ವೈಷ್ಣವಾಗ್ರೇಸರಂಘ್ರಿ
ತ್ರಿಟಿಯಾದರೂ ಎನಗೆ ಸೋಕಲು ಗತಿಗೆ ದಾರಿ ||3||

ಧ್ಯಾನಕ್ಕೆ ಸಿಲುಕುವನೆ ನಿನ್ನ ಕಾಣಲಿಬಹುದು
ಜ್ಞಾನಿಗಳು ಎಂತು ಬರುವರೊ ಅಲ್ಲಿಗೆ
ಅನಂತ ಜನುಮದಲ್ಲಿ ಜಪ ತಪ ಹೋಮ ವ್ರತ
ಏನೇನು ಮಾಡಿದರು ಇಷ್ಟು ಜನ ಕೂಡುವದೇ ||4||

ನೀನಿದ್ದ ಸ್ಥಾನದಲಿ ಸಕಲ ಪುಣ್ಯಕ್ಷೇತ್ರ
ನೀನಿದ್ದ ಸ್ಥಾನದಲಿ ಸರ್ವತೀರ್ಥ
ನೀನಿದ್ದ ಸ್ಥಾನದಲಿ ಸಮಸ್ತ ತಾತ್ವಿಕರು
ನಾನಿತ್ತ ಬರುವುದು ನಿನಗೆ ತಿಳಿಯದೆ ಸ್ವಾಮಿ ||5||

ಇದನೆ ಲಾಲಿಸು ಜೀಯಾ ನಿನ್ನದೊಂದೇ ಮೂರ್ತಿ
ನಿದರುಶನವಲ್ಲದೆ ಮಿಗಿಲಾವುದೊ
ಪದೇ ಪದೇ ಮಧ್ವಮತ ಹೊಂದಿದ ಸುಜನರ
ಹೃದಯದೊಳಗಾನಂತಪರಿ ನಿನ್ನ ರೂಪಗಳು||6||

ಭಳಿರೆ ತಿರುಮಲರಾಯ ನಿನ್ನ ಕರುಣಾ ರಸಕೆ
ನೆಲೆಗಾಣೆನೆಲೆ ಸೆರೆಹೊರೆಯೊಳು
ಒಲಿದು ಭಕುತರಿಗಾಗಿ ಮದುವೆ ಹವಣಿಸಿಕೊಂಡೆ
ಸುಲಭ ದೇವರದೇವ ವಿಜಯವಿಠ್ಠಲ ವೆಂಕಟಾ||7||

Sumadhwa Seva © 2022