ಶ್ರೀ ಗೋಪಾಲದಾಸರು ನಿರೂಪಿಸಿದ ಶಾಸ್ತ್ರ ಪ್ರಮೇಯಗಳು
ಹರಿಯೇ ಸರ್ವೋತ್ತಮ ಮರುತ ದೇವನೆ ಗುರು
ಎರಡು ಮೂರು ಭೇದ ಸ್ಥಿರವೆಂದು ಸ್ಥಾಪಿಸಿ
ಧರೆಯೊಳು ಮೆರೆದೆ ವಾದಿಗಳುಕ್ತಿಧುರದಿಂದ
ತರಿದೆ ನಂಬಿದವರ ಕರುಣದಿ ಪೊರೆದೆ |
ಜೀವ ಅಸ್ವತಂತ್ರ ದೇವ ನಿಜ ಸ್ವತಂತ್ರ
ಜೀವ ಜಡರು ದೇವರಾಧೀನರೆಂದು
ಜೀವೋತ್ತಮರಲ್ಲಿ ಭಕುತಿ ಜಡದಲ್ಲಿ ನಿರಕುತಿ
ಕಾವ ಕೊಲ್ಲುವುದೆಲ್ಲ ಹರಿಯೆಂಬ ಜ್ಞಾನ |
ಸರ್ವರಿಗೆ ಪ್ರೇರಕ ಸರ್ವಕರ್ತಭೋಕ್ತ
ಸರ್ವತ್ರದಲಿ ವ್ಯಾಪ್ತ ಸರ್ವಶಬ್ದವಾಚ್ಯ
ಸರ್ವಗುಣಪೂರ್ಣ ಸರ್ವದೋಷದೂರ
ಸರ್ವಜ್ಞಾನಗಮ್ಯ ಸರ್ವಶಕ್ತಮೂರ್ತಿ |
ಸರ್ವೇಶ ಚೆಲುವ ಗೋಪಾಲವಿಠಲರೇಯ
ಸರ್ವಾಂತರ್ಯಾಮಿ ಸಾರ್ವಭೌಮ ನಮೋ ||
ಹರಿಯೇ ಸರ್ವೋತ್ತಮನು ಹರಿಯೇ ಮೂಲದೈವ
ಹರಿ ಕ್ಷರಾಕ್ಷರದಿಂದ ವಿದೂರ ದೂರ
ಹರಿ ಜಗದ್ವ್ಯಾಪಕ ಸಕಲರಿಂದ ಭಿನ್ನ
ಹರಿ ಮೂಲರೂಅ ಅವತಾರ ಅತ್ಯಂತ ಐಕ್ಯ
ಹರಿಚಿದಾನಂದ ಚಿನ್ಮಯ ಚಿದ್ರೂಪ
ಹರಿ ಸತ್ಯಸಂಕಲ್ಪ ಉತ್ಪತ್ತಿನಾಶ ದೂರ
ಹರಿ ನಿರ್ಜಿತ ಮಾಯಾ ಲೋಕ ಮೋಹಕ ದೇವ
ನಿರಾಶ್ರಯಾನಂದ ಗೋಪಾಲವಿಠಲ
ಸರಸಿಜಾಂಡದ ದೊರೆ ಸುರತರುವೆ |