ರಾಗ : ಪಂತುವರಾಳಿ ಏಕತಾಳ
ಬೂಚಿ ಬಂದಿದೆ | ರಂಗ | ಬೂಚಿ ಬಂದಿದೆ | ಪ |
ಚಾಚಿ ಕುಡಿದು ಸುಮ್ಮನೆ ನೀ ಪಾಚಿಕೊಳ್ಳೊ ಕೃಷ್ಣಯ್ಯ | ಅ.ಪ |
ನಾಲ್ಕು ಮುಖದ ಬೂಚಿಯೊಂದು ಗೋಕುಲಕ್ಕೆ ಓಡಿ ಬಂದು
ಲೋಕರನ್ನು ಎಳೆದುಕೊಂಡು ಕಾಕು ಮಾಡಿ ಒಯ್ಯುವುದಕೆ | ೧ |
ಮೂರು ಕಣ್ಣಿನ ಬೂಚಿಯೊಂದು ಊರೂರ ಸುತ್ತಿ ಬಂದು
ದ್ವಾರದಲ್ಲಿ ನಿಂದಿದೆ ನೋಡೋ ಪೋರರನ್ನು ಒಯ್ಯುವುದಕ್ಕೆ | ೨ |
ಅಂಗವೆಲ್ಲ ಕಂಗಳುಳ್ಳ ಶೃಂಗಾರಮುಖದ ಬೂಚಿ
ಬಂಗಾರದಂಥ ಮಕ್ಕಳನೆಲ್ಲ ಕಂಗೆಡಿಸಿ ಒಯ್ಯುವುದಕೆ | ೩ |
ಆರು ಮುಖದ ಬೂಚಿಯೊಂದು ಈರಾರು ಕಂಗಳದಕೆ
ವಾರು ವಾರು ಆಳುವ ಮಕ್ಕಳ ದೂರ ಸೆಳೆದು ಒಯ್ಯುವುದಕೆ | ೪ |
ಮರದ ಮೇಲೆ ಇರುವುದೊಂದು ಕರಾಳ ಮುಖದ ಬೂಚಿ
ತರಳರನ್ನು ಎಳೆದುಕೊಂಡು ಪುರಂದರವಿಠಲಗೊಪ್ಪಿಸಲಿಕೆ | ೫|
ನಾಲ್ಕು ಮುಖದ ಬೂಚಿ – ಬ್ರಹ್ಮದೇವರು
ಮೂರು ಕಣ್ಣಿನ ಬೂಚಿ – ರುದ್ರದೇವರು
ಅಂಗವೆಲ್ಲ ಕಂಗಳುಳ್ಳ – ಇಂದ್ರ (ಸಹಸ್ರಾಕ್ಷ)
ಆರು ಮುಖದ ಬೂಚಿ – ಷಣ್ಮುಖ
——————————————————————————
“ಬಾರದು” ಪಟ್ಟಿ
ಕೈಮೀರಿ ಹೋದ ಮಾತಿಗೆ ಮರುಗಬಾರದು | ಪ |
ಮಾತು ಕೇಳದ ಮಕ್ಕಳ ಹೆಸರು ತೆಗೆಯಬಾರದು |
ಪ್ರೀತಿಯಿಲ್ಲದ ಪತಿಯ ಕಂಡು ಹಿಗ್ಗಬಾರದು | ೧ |
ಜಾರತ್ವ ಮಾಡೊ ಪತ್ನಿಯ ಕೂಡಿ ಆಳಬಾರದು
ವೈರತ್ವ ಮಾಳ್ಪವರ ಸೊಲ್ಲು ಕೇಳಬಾರದು | ೨ |
ದುಷ್ಟೆ ಕರ್ಕಶಿ ಸ್ತ್ರೀಯಳ ಹೆಸರು ತೆಗೆಯಬಾರದು |
ಹತ್ತು ಮಂದಿಗಂಜದವನ ಸ್ನೇಹ ಮಾಡಬಾರದು |೩|
ಪಂಕ್ತ್ಯಾಗೆ ಪರಪಂಕ್ತಿಯನ್ನು ಮಾಡಬಾರದು |
ಮಂಕು ಜೀವನಾಗಿ ಮುಕ್ತಿ ಬೇಡಬಾರದು | ೪ |
ಆಚಾರಹೀನನ ಮನೆಯೊಳೂಟ ಮಾಡಬಾರದು |
ವಿಚಾರವಿಲ್ಲದ ಸಭೆಯೊಳು ಕೂಡ್ರಬಾರದು | ೫ |
ಪರಪುರುಷರಿದ್ದೆಡೆಯೊಳೊಬ್ಬಳಿರಲು ಬಾರದು |
ಪುರಂದರ ವಿಠಲನ ಧ್ಯಾನ ಮರೆಯಬಾರದು | ೬ |
———————————————————————-
ಆಡಿಸಿದಳು ಯಶೋದೆ ಜಗದೋದ್ಧಾರನ | ಪ |
ಜಗದೋದ್ಧಾರನ ಮಗನೆಂದು ತಿಳಿಯುತ |
ಸುಗುಣಾಂತರಂಗನ ಆದಿಸಿದಳೆಶೋದೆ | ಅ.ಪ. |
ನಿಗಮಕೆ ಸಿಲುಕದ ಅಗಣಿತ ಮಹಿಮನ
ಮಗುಗಳ ಮಾಣಿಕ್ಯನ ಆದಿಸಿದಳೆಶೋದೆ | 1 |
ಅಣೋರಣೀಯನ ಮಹತೋಮಹೀಮನ |
ಅಪ್ರಮೇಯನ ಆಡಿಸಿದಳೆಶೋದೆ | 2 |
ಪರಮ ಪುರುಷನ ಪರ ವಾಸುದೇವನ |
ಪುರಂದರವಿಠ್ಠಲನ ಆದಿಸಿದಳೆಶೋದೆ | 3 |
—————————————————————————
ಕೃಷ್ಣಮೂರ್ತಿ ಕಣ್ಣ ಮುಂದೆ ನಿಂತಿದಂತಿದೆ | ಪ |
ಕಷ್ಟಗಳೆಲ್ಲವ ಪರಿಹರಿಸಿ ಮನ-
ದಿಷ್ಟಾರ್ಥಗಳನ್ನೆಲ್ಲ ಕೊಟ್ಟುರಕ್ಷಿಸುವಂತ |ಅ.ಪ|
ಮಸ್ತಕದಲಿ ಮಾಣಿಕದ ಕಿರೀಟ |
ಕಸ್ತೂರಿ ತಿಲಕದಿಂದೆಸೆವ ಲಲಾಟ |
ಶಿಸ್ತಿಲಿ ಕೊಳಲನೂದುವ ಓರೆನೋಟ |
ಕೌಸ್ತುಭ ಎಡಬಲದಲಿ ಓಲಾಟ | ೧ |
ಮಘಮಘಿಸುವ ಸೊಬಗಿನ ಸುಳಿಗುರುಳು |
ಚಿಗುರು ತುಳಸಿ ವನಮಾಲೆಯ ಕೊರಳು |
ಬಗೆಬಗೆ ಹೊನ್ನುಂಗುರ ನಿಟ್ಟ ಬೆರಳು |
ಸೊಗಸಿನ ನಾಭಿಯ ತಾವರೆಯರಳು | ೨ |
ಉಡಿದಾರ ಒಡ್ಯಾಣ ನಿಖಿಲಾಭರಣ |
ಉಡುಗೆ ಪೀತಾಂಬರ ರವಿ ಶಶಿಕಿರಣ |
ಕಡಗ ನೂಪುರ ಗೆಜ್ಜೆಗಳನಿಟ್ಟ ಚರಣ |
ಒಡೆಯ ಶ್ರೀ ಪುರಂದರವಿಠಲನ ಕರುಣ | ೩ |
————————————-
ಕೊಳಲನೂದುತ್ತ ಬಂದ ನಮ್ಮ ಗೋಪಿಯಕಂದ-
ಕೊಳಲನೂದುವುದು ಬಲುಚೆಂದ | ಪ |
ಆ ವಸುದೇವನಕಂದ ದೇವಕಿ ಬಸಿರೊಳು ಬಂದ
ಮಾವ ಕಂಸನ ಕೊಂದ ಭಾವಜನೈಯ್ಯ ಮುಕುಂದ | 1 |
ಮುತ್ತಿನಾಭರಣವ ತೊಟ್ಟು ಹಸ್ತದಿ ಕೊಳಲನಿಟ್ಟು
ಕಸ್ತೂರಿತಿಲಕದ ಬೊಟ್ಟು ತುತ್ತುರುತುರುರೆಂಬ ನಾದವಪಿಡಿಯುತ | 2 |
ಹಿಂದೆ ಗೋವುಗಳ ಹಿಂಡು ಮುಂದ ಗೋಪಾಲಕರ ದಂಡು
ಹಿಂಗದೆ ದೈತ್ಯರ ಕೊಂದ ಪುರಂದರವಿಠಲ ಬಲು ಚೆಂದ | 3 |
———————————————