ನಂಬಿದೆ ನಿನ್ನ ಪಾದ

*ಶ್ರೀ ಮೊದಲಕಲ್ಲು ಶೇಷದಾಸರ ಕೃತಿ*

*ನಂಬಿದೆ ನಿನ್ನ ಪಾದ ಗುರು ಮುಖ್ಯಪ್ರಾಣ*

*ರಾಗ ಕಲ್ಯಾಣಿ               ಆದಿತಾಳ*

ನಂಬಿದೆ ನಿನ್ನಯ ಪಾದ ಮುಖ್ಯಪ್ರಾಣ
ನಂಬಿದೆ ನಿನ್ನಯ ಪಾದ ॥ ಪ ॥
ನಂಬಿದೆ ನಿನ್ನಯ ಪಾದಾಂಡಬರ ತೊಲಗಿಸಿ
ಡಿಂಬದೊಳಗೆ ಹರಿಯ ಬಿಂಬ ಪೊಳೆವಂತೆ ಮಾಡೋ॥ಅ.ಪ॥

ಇಪ್ಪತ್ತು ಒಂದು ಸಾವಿರ ಐದೊಂದು ನೂರು
ಅಪ್ರತಿ ಹಂಸಮಂತ್ರ ।
ತಪ್ಪದೆ ದಿನದಿನ ಒಪ್ಪದಿಂದಲಿ ಜಪಿಸಿ
ತಪ್ಪಿಸೊ ಭವವ ಸಮ್ಮಿಪ್ಪದ ಜೀವರಿಗೆ ॥
ಅಪ್ಪನಂದದಿ ಪುಣ್ಯವಪ್ಪಂತೆ ಕರುಣಿಸೊ
ಕಪ್ಪುವರ್ಣನ ಕೂಡಪ್ಪಿಸಿ ಪಾಲಿಸೊ ॥ 1 ॥

ಹತ್ತೇಳು ಎರಡು ಯುತ ಸಾವಿರ ನಾಡಿ
ಸುತ್ತಿ ಸೂತ್ರಮಾರುತ ।
ಉತ್ತರ ಲಾಲಿಸೊ ಉತ್ಕ್ರಮಣದಲ್ಲಿ
ನೆತ್ತಿಯ ದ್ವಾರದಿಂದಲೆತ್ತ ಪೋಗಲೀಸದೆ ॥
ತತ್ತುವರೊಳು ಜೀವೋತ್ತಮನೆ ಸತ್ –
ಚಿತ್ತೆನಗೆ ಕೊಡು ಉತ್ತರ ಧರಿಸೋ ॥ 2 ॥

ಅಂತರಂಗದ ಉಸಿರ ಹೊರಗೆ ಬಿಟ್ಟು
ಅಂತರಂಗಕ್ಕೆ ಸೇದುವ ।
ಪಂಥದೊಳು ನೀನೆ ಕಂತುಜನಕನಲ್ಲಿ
ಮಂತ್ರಿಯೆನೆಸಿ ಸರ್ವರಂತರ್ಯಾಮಿ ಆಗಿ ॥
ನಿಂತು ನಾನಾಬಗೆ ತಂತು ನಡಿಸುವ
ಹೊಂತಕಾರಿ ಗುಣವಂತ ಬಲಾಢ್ಯ ॥ 3 ॥

ಪಂಚಪರಣರೂಪನೆ ಸತುವಕಾಯ
ಪಂಚಾದ್ರಿಗಳ ಲೋಪನೆ ।
ಮುಂಚಿನ ಪರಮೇಷ್ಠಿ ಸಂಚಿತಗಾಮಿ ಬಿಡಿಸಿ
ಕೊಂಚ ಮಾಡೊ ಪ್ರಾರಬ್ಧ ॥

ವಂಚನೆ ಗೈಸದೆ ಅಂಚಂಚಿಗೆ ಪರಪಂಚವೆ ಓಡಿಸಿ
ಪಂಚವಕ್ತ್ರಹರಿಮಂಚದ ಗುರುವೆ ॥ 4 ॥

ಯೋಗಾಸನದೊಳಿಪ್ಪ ಯಂತ್ರೋದ್ಧಾರ
ಭಾಗವತ – ರಪ್ಪ ।
ಯೋಗೀಗಳೀಶವ್ಯಾಸಯೋಗಿಗೊಲಿದ ನ್ಯಾಸ
ಶ್ರೀತುಂಗಭದ್ರಾವಾಸ ಬಾಗುವೆ ಕೊಡು ಲೇಸ ॥
ಶ್ರೀಗುರುವಿಜಯವಿಟ್ಠಲನ* ಪಾದಕೆ
ಬಾಗುವ ಭವದೂರ ಜಾಗರಮೂರುತಿ ॥ 5 ॥

 

*ನಂಬಿದೆ ನಿನ್ನಯ ಪಾದ ಮುಖ್ಯಪ್ರಾಣ*
ನಂಬಿದೆ ನಿನ್ನಯ ಪಾದ ॥ ಪ ॥*
ನಂಬಿದೆ ನಿನ್ನಯ ಪಾದಾಂಡಬರ ತೊಲಗಿಸಿ*
ಡಿಂಬದೊಳಗೆ ಹರಿಯ ಬಿಂಬ ಪೊಳೆವಂತೆ ಮಾಡೋ॥ಅಪ॥*

( *ಶ್ರೀಗುರುವಿಜಯವಿಟ್ಠಲ* ಎಂಬಲ್ಲಿ ‘ *ಶ್ರೀ* ‘ ಎಂದರೆ ಲಕ್ಷ್ಮೀದೇವಿಗೆ ‘ *ಗುರು* ‘ ಜ್ಞಾನಸ್ಫೂರ್ತಿದಾಯಕನಾದ, *ವಿಜಯವಿಟ್ಠಲ* ಎಂದು ಅರ್ಥ. )

ಶ್ರೀಯೋऽಪಿ ಚ ಜ್ಞಾನ ಸ್ಫೂರ್ತಿಸ್ಸದಾ ತಸ್ಮೈ ಹರಯೇ ಗುರುವೇ ನಮಃ’ ಎಂಬ ಪ್ರಮಾಣವನ್ನು ಗಮನಿಸಿ ಶ್ರೀವಿಜಯದಾಸಾರ್ಯಕೃತವಿದೆಂದೇ ತಿಳಿದರೆ ಸರಿ. ಚಿಪ್ಪಗಿರಿಯ ಮೂಲಪ್ರತಿಯಲ್ಲಿ ಈ ಪದ ಶ್ರೀವಿಜಯದಾಸಾರ್ಯರ ಪದಗಳ ಜೊತೆಯಲ್ಲೇ ಇದೆ. ಗುರುವಿಜಯರಾಯರ ಅಂದರೆ ಶ್ರೀಮೊದಲಕಲ್ಲು ಶೇಷದಾಸರ ಕೃತಿ ಸಂಗ್ರಹದ ಮೂಲಪ್ರತಿಯಲ್ಲಿ ಈ ಪದವಿಲ್ಲ.)

*ಆಡಂಬರ ತೊಲಗಿಸಿ* = ಡಾಂಭಿಕ ನಡವಳಿಕೆಗಳನ್ನು ಬಿಡಿಸಿ; *ಡಿಂಬದೊಳಗೆ* = ದೇಹದಲ್ಲಿ (ಈ ಸಾಧನದೇಹದಲ್ಲಿಯೇ ಶ್ರೀಹರಿಯ ಅಪರೋಕ್ಷವಾಗುತ್ತದೆ – ಸಾಧನಪೂರ್ತಿಯ ನಂತರ, ಶ್ರೀಭಾರತೀಶನ ಅನುಗ್ರಹದಿಂದ); *ಬಿಂಬ* *ಪೊಳೆವಂತೆ* = ಬಿಂಬರೂಪಿ ಶ್ರೀಹರಿಯು ಪ್ರಕಾಶಿಸುವಂತೆ (ಪ್ರತ್ಯಕ್ಷತೋರುವಂತೆ).

*ಇಪ್ಪತ್ತು ಒಂದು ಸಾವಿರ ಐದೊಂದು ನೂರು*
*ಅಪ್ರತಿ ಹಂಸಮಂತ್ರ ।*
*ತಪ್ಪದೆ ದಿನದಿನ ಒಪ್ಪದಿಂದಲಿ ಜಪಿಸಿ*
*ತಪ್ಪಿಸೊ ಭವವ ಸಮ್ಮಿಪ್ಪದ ಜೀವರಿಗೆ ॥*
*ಅಪ್ಪನಂದದಿ ಪುಣ್ಯವಪ್ಪಂತೆ ಕರುಣಿಸೊ*
*ಕಪ್ಪುವರ್ಣನ ಕೂಡಪ್ಪಿಸಿ ಪಾಲಿಸೊ ॥ 1 ॥*

*ಇಪ್ಪತ್ತು ಒಂದುಸಾವಿರ ಐದೊಂದು ನೂರು* = ೨೧,೬೦೦; *ಅಪ್ರತಿ* *ಹಂಸಮಂತ್ರ* = ಅಸದೃಶವಾದ ಹಂಸಮಂತ್ರವನ್ನು (‘ _ಹಂಸಃಸೋऽಹಂ ಸ್ವಾಹಾ_ ‘; ಹಂಸಃ = ನಿರ್ದೋಷಿಯಾದ ಶ್ರೀಹರಿಯೇ, ನನ್ನ ಅಂತರ್ಯಾಮಿಯು – ಆತನಿಗೇ ನನ್ನನ್ನು ಸಮರ್ಪಿಸಿದ್ದೇನೆ, ಎಂಬರ್ಥದ ಮಹಾಮಂತ್ರ;) *ತಪ್ಪದೆ* = ಯಾವ ಕಾರಣದಿಂದಲೂ, ಎಂದೂ ಬಿಡದೆ; *ದಿನದಿನದಿ* = ಪ್ರತಿದಿನವೂ; *ಒಪ್ಪದಿಂದಲಿ* = ಒಪ್ಪವಾಗಿ (ಶ್ರೀಹರಿಪ್ರೀತಿಯಾಗುವಂತೆ); *ಸಮ್ಮಿಪ್ಪದ* *ಜೀವರಿಗೆ* = ನಿನ್ನನ್ನು ಭಕ್ತಿಯಿಂದ ಸೇವಿಸುವವರಿಗೆ; *ಅಪ್ಪನಂದದಿ* = ತಂದೆಯಂತೆ (ಪುತ್ರವಾತ್ಸಲ್ಯದಿಂದ); *ಪುಣ್ಯವಪ್ಪಂತೆ* = ಪುಣ್ಯವೇ ದೊರೆಯುವಂತೆ (ಸತ್ಕರ್ಮಗಳೇ ಸಂಭವಿಸುವಂತೆ); *ಕಪ್ಪುವರ್ಣನ ಕೂಡಪ್ಪಿಸಿ ಪಾಲಿಸೋ* = ಶ್ರೀಕೃಷ್ಣನ ಸನ್ನಿಧಿಗೆ ಒಯ್ದು (ಕೃಷ್ಣಾನುಗ್ರಹಪಾತ್ರನಾಗುವಂತೆ ಮಾಡಿ) ಕಾಪಾಡು.

*ಹತ್ತೇಳು ಎರಡು ಯುತ ಸಾವಿರ ನಾಡಿ*
*ಸುತ್ತಿ ಸೂತ್ರಮಾರುತ ।*
*ಉತ್ತರ ಲಾಲಿಸೊ ಉತ್ಕ್ರಮಣದಲ್ಲಿ*
*ನೆತ್ತಿಯ ದ್ವಾರದಿಂದಲೆತ್ತ ಪೋಗಲೀಸದೆ ॥*
*ತತ್ತುವರೊಳು ಜೀವೋತ್ತಮನೆ ಸತ್ -*
*ಚಿತ್ತೆನಗೆ ಕೊಡು ಉತ್ತರ ಧರಿಸೋ ॥ 2 ॥*

*ಹತ್ತೇಳು ಎರಡು ಯುತ ಸಾವಿರ ನಾಡಿ* = (10×7=70+2=72×1000=72000) ಎಪ್ಪತ್ತೆರಡು ಸಾವಿರ ನಾಡಿಗಳಲ್ಲಿ ( *ಯುತ* = ಕೂಡಿಸಿದ); *ಸುತ್ತಿ* = ಸುತ್ತುತ್ತುಲೇ ಇದ್ದು; *ಸೂತ್ರಮಾರುತ* = ಸೂತ್ರನಾಮಕಪ್ರಾಣ; *ಉತ್ತರ ಲಾಲಿಸು* = ನನ್ನ ಮುಂದಿನದನ್ನು (ಮುಂದಿನ ಅಪೇಕ್ಷೆಯನ್ನು)ಕಿವಿಗೊಟ್ಟು ಕೇಳು; *ಉತ್ಕ್ರಮಣದಲ್ಲಿ* = ನಾನು ಈ ದೇಹವನ್ನು ಬಿಟ್ಟು ಹೋಗುವ ಸಮಯದಲ್ಲಿ; *ನೆತ್ತಿಯ ದ್ವಾರದಿಂದಲೆ* = ಬ್ರಹ್ಮರಂಧ್ರದಿಂದಲೇ; *ಎತ್ತ ಪೋಗಲೀಸದೇ* (ಅನ್ಯಮಾರ್ಗದಿಂದ) ಹೊರಡುವುದಕ್ಕೆ ಅವಕಾಶಕೊಡದೆ (ಬ್ರಹ್ಮರಂಧ್ರದಿಂದ ಹೊರಟವರೇ ತಿರುಗಿ ಸಂಸಾರಕ್ಕೆ ತರದ ಅರ್ಚಿರಾದಿಮಾರ್ಗದಲ್ಲಿ ಹೋಗುತ್ತಾರೆಂಬ ನಿಯಮವು ಸೂಚಿತವಾಗಿದೆ); *ತತ್ತುವರೊಳು* = ತತ್ವಾಭಿಮಾನಿ ಜೀವರಲ್ಲಿ (ದೇವತೆಗಳೂ ಜೀವರೇ); *ಸತ್ ಚಿತ್ ಎನಗೆ ಕೊಡು* = ಒಳ್ಳೆಯ ಜ್ಞಾನ ಕೊಡುತ್ತ (ಸುಖದುಃಖಗಳಿಗೆ ಒಳಗಾಗದ ಸಮಚಿತ್ತತ್ವವನ್ನು ನನಗೆ ಅನುಗ್ರಹಿಸು); *ಉತ್ತರ ಧರಿಸೋ* = ಶ್ರೇಷ್ಠವಾದುದನ್ನು ದೊರಕಿಸು.

*ಅಂತರಂಗದ ಉಸಿರ ಹೊರಗೆ ಬಿಟ್ಟು*
*ಅಂತರಂಗಕ್ಕೆ ಸೇದುವ ।*
*ಪಂಥದೊಳು ನೀನೆ ಕಂತುಜನಕನಲ್ಲಿ*
*ಮಂತ್ರಿಯೆನೆಸಿ ಸರ್ವರಂತರ್ಯಾಮಿ ಆಗಿ ॥*
*ನಿಂತು ನಾನಾಬಗೆ ತಂತು ನಡಿಸುವ*
*ಹೊಂತಕಾರಿ ಗುಣವಂತ ಬಲಾಢ್ಯ ॥ 3 ॥*

*ಅಂತರಂಗದ ಉಸಿರ* = ಒಳಗಿನ ಉಸಿರನ್ನು (ಶ್ವಾಸವಾಯುವನ್ನು); *ಹೊರಗೆ ಬಿಟ್ಟು* = ನಿಚ್ಛ್ವಾಸದಿಂದ ಹೊರಗೆ ಹಾಕಿ; *ಅಂತರಂಗಕ್ಕೆ ಸೇದುವ* = (ಪುನಃ)ಉಚ್ಛ್ವಾಸದಿಂದ ಉಸಿರನ್ನು (ವಾಯುವನ್ನು) ಒಳಗೆ ತೆಗೆದುಕೊಳ್ಳುವ; *ಪಂಥದೊಳು* = ಈ ಮಾರ್ಗದಲ್ಲಿ; *ಕಂತುಜನಕನಲ್ಲಿ* = ಮನ್ಮಥಪಿತನಲ್ಲಿ (ಶ್ರೀಕೃಷ್ಣನಲ್ಲಿ); *ಮಂತ್ರಿ ಎನಿಸಿ* = ಮುಖ್ಯಮಂತ್ರಿಪದದಲ್ಲಿದ್ದು; *ಸರ್ವಾಂತರ್ಯಾಮಿಯಾಗಿ* = ಸರ್ವರ ಒಳಗಿದ್ದು; *ನಾನಾಬಗೆ ತಂತು ನಡಿಸುವ* = ವಿವಿಧಕರ್ಮಸಂತತಿಯನ್ನು; *ಹೊಂತಕಾರಿ* = ಚತುರ.

*ಪಂಚಪರಣರೂಪನೆ ಸತುವಕಾಯ*
*ಪಂಚಾದ್ರಿಗಳ ಲೋಪನೆ ।*
*ಮುಂಚಿನ ಪರಮೇಷ್ಠಿ ಸಂಚಿತಗಾಮಿ ಬಿಡಿಸಿ*
*ಕೊಂಚ ಮಾಡೊ ಪ್ರಾರಬ್ಧ ॥*
*ವಂಚನೆ ಗೈಸದೆ ಅಂಚಂಚಿಗೆ* *ಪರಪಂಚವೆ ಓಡಿಸಿ*
*ಪಂಚವಕ್ತ್ರಹರಿಮಂಚದ ಗುರುವೆ ॥ 4 ॥*

*ಪಂಚಪರಣರೂಪನೆ* = (ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನಗಳೆಂಬ) ಐದು ರೂಪಗಳಿಂದ (ಪಂಚ ತನ್ನಾಮಕ ದಾಸಪ್ರಾಣರಲ್ಲಿ) ಇರುವ ಪ್ರಾಣ (ಪರಣ = ಪ್ರಾಣ); *ಸತ್ವಶರೀರ* = (ಬ್ರಹ್ಮವಾಯುಗಳ ಪ್ರಾಕೃತಶರೀರವು) ಶುದ್ಧ ಸತ್ತ್ವಾತ್ಮಕವಾದುದು (‘ _ಸತ್ವಸತ್ವಮಹಾಸತ್ವಸೂಕ್ಷ್ಮ ಸತ್ವಶ್ಚತುರ್ಮುಖಃ_ ‘ – ಇತ್ಯಾದಿ ಪ್ರಮಾಣದಂತೆ); *ಪಂಚಾದ್ರಿಗಳ ಲೋಪನೆ* = ತಮಸ್ಸು, ಮೋಹ, ಮಹಾಮೋಹ, ತಾಮಿಸ್ರ, ಅಂಧತಾಮಿಸ್ರ ಇವುಗಳಿಂದ ದೂರನೆ (ಇವುಗಳು ಬಹುದೊಡ್ಡ ಪರ್ವತಗಳ ಸದೃಶವಾದ ಅವಿದ್ಯಾ); *ಮುಂಚಿನ ಪರಮೇಷ್ಠಿ* = ಭಾವೀಬ್ರಹ್ಮದೇವ; (ಮುಂಚಿನ = ಮುಂದಿನ ಕಲ್ಪದ); *ಸಂಚಿತಾಗಾಮಿ ಬಿಡಿಸಿ* = ಸಂಚಿತ ಆಗಾಮಿಕರ್ಮಗಳು ಲೇಪಿಸದಂತೆ ಮಾಡಿ (ಅಪರೋಕ್ಷ ದರ್ಶನದಿಂದ ಸಂಚಿತಕರ್ಮ ಕ್ಷಯವೂ, ಆಗಾಮಿ (ಆ ಮುಂದಿನ) ಕರ್ಮಗಳ ನಿರ್ಲೇಪವೂ ಲಭಿಸುತ್ತದೆ); *ಕೊಂಚ ಮಾಡೊ ಪ್ರಾರಬ್ಧ* = ಭೋಗಿಸಲೇಬೇಕಾದ ಪ್ರಾರಬ್ಧಕರ್ಮವನ್ನು ಉಪಮರ್ದದಿಂದ ಕಡಿಮೆ ಮಾಡು; *ವಂಚನೆಗೈಸದೆ* = (ನನ್ನನ್ನು ಸಂಸಾರದಲ್ಲಿಯೇ ಇಟ್ಟು) ವಂಚಿಸದೇ; *ಅಂಚಂಚಿಗೆ* = ಕಡೆ ಕಡೆಗೆ (ಸಾಧನೆಯಲ್ಲಿ ಮುಂದೆ ಕರೆದೊಯ್ದಂತೆ); *ಪರಪಂಚಗಳೋಡಿಸಿ* = ಹರಿವಿಸ್ಮಾರಕವಾದ ಶಬ್ದ, ರೂಪ,ರಸ, ಗಂಧ, ಸ್ಪರ್ಶ ಎಂಬ ತನ್ಮಾತ್ರಗಳ ಸಂಬಂಧತೊಲಗಿಸಿ; *ಪಂಚವಕ್ತ್ರ ಹರಿಮಂಚದ ಗುರುವೆ* = ರುದ್ರದೇವ ಮತ್ತು ಶೇಷದೇವ ಇವರಿಗೆ ಗುರುವಾದ ಹೇ ಮುಖ್ಯಪ್ರಾಣ! (ಶೇಷದೇವನು ಹರಿಯ ಮಂಚ – ಶಯ್ಯಾರೂಪನು).

*ಯೋಗಾಸನದೊಳಿಪ್ಪ ಯಂತ್ರೋದ್ಧಾರ*
*ಭಾಗವತ – ರಪ್ಪ ।*
*ಯೋಗಿಗಳೀಗೀಶವ್ಯಾಸಯೋಗಿಗೊಲಿದ ನ್ಯಾಸ*
*ಶ್ರೀತುಂಗಭದ್ರಾವಾಸ ಬಾಗುವೆ ಕೊಡು ಲೇಸ ॥*
*ಶ್ರೀಗುರುವಿಜಯವಿಟ್ಠಲನ ಪಾದಕೆ*
*ಬಾಗುವ ಭವದೂರ ಜಾಗರಮೂರುತಿ ॥ 5 ॥*

*ಯೋಗಾಸನದೊಳಿಪ್ಪ* = ಯೋಗಾಸನದಲ್ಲಿ ಸ್ಥಿತನಾದ; *ಯಂತ್ರೋದ್ಧಾರಕ ಭಾಗವತರಪ್ಪ* = ಹರಿಭಕ್ತರ ತಂದೆಯಾದ ಹೇ ಯಂತ್ರೋದ್ಧಾರಕ ಮುಖ್ಯಪ್ರಾಣ! (ಪಂಪಾಕ್ಷೇತ್ರದಲ್ಲಿರುವ ಯಂತ್ರೋದ್ಧಾರಕ ಪ್ರಾಣದೇವರು); *ವ್ಯಾಸಯೋಗಿಗೊಲಿದ* = ಶ್ರೀವ್ಯಾಸತೀರ್ಥರಿಗೆ ಒಲಿದ (ಪ್ರಸನ್ನನಾದ); *ನ್ಯಾಸ* = (ಅವರಿಂದ) ಪ್ರತಿಷ್ಠಾಪಿತವಾದ ಸ್ಥಿತಿಯುಳ್ಳ; *ಶ್ರೀತುಂಗಭದ್ರಾವಾಸ* = ಪವಿತ್ರವಾದ ತುಂಗಭದ್ರಾತೀರದಲ್ಲಿರುವ; *ಬಾಗುವೆ* = (ನಿನ್ನ ಪಾದಗಳಲ್ಲಿ) ಶಿರಸಾನಮಿಸುವೆ; *ಬಾಗುವ* = (ಶ್ರೀಹರಿಯಲ್ಲಿ) ನಮ್ರನಾಗಿ ಅವನ ಪಾದದಲ್ಲಿ ಬಾಗಿದ ಶಿರವುಳ್ಳ; *ಜಾಗರಮೂರುತಿ* = ನಿತ್ಯಜಾಗ್ರತನಾದವ (ಶ್ರೀವಾಯುದೇವನು ನಿದ್ರಾರಹಿತನು).

*ವ್ಯಾಖ್ಯಾನ* :
*ಕೀರ್ತಿಶೇಷ ಮಾಧ್ವಭೂಷಣ ದಿ॥ ಶ್ರೀ* *ಬಿ. ಭೀಮರಾವ್ , ದಾವಣಗೆರೆ.*

 

 

Sumadhwa Seva © 2022