kanakadasara padagalu

Enu olle shrihari ninna tutisi kELodu

ಏನು ಒಲ್ಲೆ ಶ್ರೀಹರಿ ನಿನ್ನ ತುತಿಸಿ ಕೇಳೋದು |
ಜ್ಞಾನ ಭಕ್ತಿ ಕೊಡು ಎಮಗಿದೊಂದೇ ದೊಡ್ಡದು | ಪ |
ಒಂದು ನೆವದಿಂದ ಎನ್ನ ಕಾಡಿದವರಿಗೆ
ಹೊನ್ನು ಹೆಣ್ಣು ಗಂಡು ಮಕ್ಕಳು ಆಗಲಿ ಅವರಿಗೆ
ಕಂದಿ ಕುಂದಿ ಎನ್ನ ಬಾಧೆ ಪಡಿಸಿದವರಿಗೆ
ಕನ್ಯಾದಾನದ ಫಲ ಬಂದು ತಟ್ಟಲಿ ಅವರಿಗೆ | ೧ |
ಹಿಂದೆ ನನ್ನ ಬೈದವರೆಲ್ಲ ಚೆಂದಾಗಿರಲಿ
ಮುಂದೆ ನನ್ನ ಬೈಯುವಎಲ್ಲ ಅಂದಣವೇರಲಿ
ಕುಂದು ಇಟ್ಟವರೆಲ್ಲ ಕುದುರೆಯ ಕಟ್ಟಿ ಬಾಳಲಿ
ಬಂದು ಒದ್ದವರಿಗೆ ಭತ್ತದ ಗದ್ದೆ ಬೆಳೆಯಲಿ | ೨ |
ಜನರೊಳಗೆ ಮಾನಭಂಗ ಮಾಡಿದವರಿಗೆ
ಜೇನು ತುಪ್ಪ ಸಕ್ಕರೆ ಊಟ ಆಗಲಿ ಅವರಿಗೆ |
ಹಾನಿ ಬಾರದಂಥ ಲೋಕ ಆಗಲಿ ಅವರಿಗೆ
ಮಹಾನುಭಾವ ಮುಕ್ತಿ ಕೊಡುವ ನೆಲೆಯಾದಿಕೇಶವ | ೩ |
ಏನು ಒಲ್ಲೆ ಶ್ರೀಹರಿ ನಿನ್ನ ತುತಿಸಿ ಕೇಳೋದು
ಜ್ಞಾನ ಭಕ್ತಿ ಕೊಡು ಎಮಗಿದೊಂದೇ ದೊಡ್ಡದು ||

ಆಚಾರ್ಯರ ಮಧ್ವರ ತತ್ತ್ವಸಿದ್ಧಾಂತಕ್ಕೆ ಬದ್ಧರಾದಂತ ಕನಕದಾಸರು ಪಲ್ಲವಿಯಲ್ಲಿ ಕೇಳಿಕೊಂಡಿದ್ದು ಜ್ಞಾನ ಭಕ್ತಿ ಕೊಡು ಎಂದು.
ಕನಕದಾಸರು ಮೂಲತ: ಒಬ್ಬ ಪಾಳೇಗಾರನಾಗಿದ್ದವರು. ಸಕಲ ಸುಖಸವಲತ್ತನ್ನೂ ಅನುಭವಿಸಿದ್ದವರು, ಅವರೂ ತಮಗೆ ಹಲವಾರು ನಿಂದನ, ಅವಮಾನ, ಬೈಗುಳ ಎಲ್ಲವನ್ನೂ ಅನುಭವಿಸಿ, ಎಲ್ಲವನ್ನು ತ್ಯಜಿಸಿ, ವ್ಯಾಸರಾಜರ ಬಳಿ ಬಂದು ದಾಸದೀಕ್ಷೆ ಪಡೆದಿದ್ದರು. ಆದ್ದರಿಂದಲೇ ಶ್ರೀಹರಿ ಕಾರುಣ್ಯವೊಂದೇ ನಮಗೆ ಮೆಟ್ಟಲು ಹೊರತು ಬೇರೇನೂ ಇಲ್ಲ ಎಂದಿದ್ದಾರೆ. ಇದು ವೈರಾಗ್ಯದ ಸೂಚಕವಲ್ಲದೆ ಇನ್ನೇನು.

ಮುಂದೆ –
ನಮ್ಮನ್ನು ಕಾಡಿದವರಿಗೆ ಸಕಲ ಇಷ್ಟಾರ್ಥಗಳನ್ನು ನೀಡಲಿ ಎಂದಿದ್ದಾರೆ – ಹೊನ್ನು, ಮಕ್ಕಳು ಆಗಲಿ ಅವರಿಗೆ, ಮತ್ತು ಅವರಿಗೆ ಕನ್ಯಾದಾನದ ಫಲ ಲಭಿಸಲಿ ಎಂದಿದ್ದಾರೆ.
ನಮ್ಮನ್ನು ಹಿಂದೆ ಮುಂದೆ ನಿಂದಿಪರಿಗೂ ಕೂಡ ಚೆಂದಾಗಿರಲಿ ಎಂದಿದ್ದಾರೆ. ನಮಗೆ ವೃಥಾ ನಿಂದಿಸಿದವರಿಗೂ ಶುಭ ಹಾರೈಸಿ ಅವರು ಕುದುರೆಯನ್ನು ಕಟ್ಟಿ ಬಾಳುವಷ್ಟು ಸುಖವಾಗಿರಲಿ ಎಂದಿದ್ದಾರೆ. ನಮಗೆ ಒದ್ದವರ ಭತ್ತದ ಗದ್ದೆ ಹುಲುಸಾಗಿ ಬೆಳೆಯಲಿ.
ನಮ್ಮನ್ನು ಜನರೊಳಗೆ ಅವಮರ್ಯಾದೆ ಮಾಡಿದವರಿಗೆ ಜೇನು ತುಪ್ಪ ಸಕ್ಕರೆ ಊಟ ಆಗಲಿ, ಅವರಿಗೆ ಹಾನಿಯಿಲ್ಲದ ಲೋಕ ಸಿಗಲಿ, ಮುಕ್ತಿ ಸಿಗಲಿ ಎಂದಿದ್ದಾರೆ.

+++++++++++++++++++++++++++

varakavigaLa munde
ವರಕವಿಗಳ ಮುಂದೆ ನರಕವಿಗಳು ವಿದ್ಯೆ ಮಾಡಬಾರದು , ಈ
ಧರಣಿಯ ಕಲ್ಲಿಗೆ ಶರಣೆಂದು ಪೂಜೆಯ ಮಾಡಬಾರದು||
ಪಾಪಿಗಳಿದ್ದಲ್ಲಿಗೆ ರೂಪುಳ್ಳ ವಸ್ತುವ ತೋರಬಾರದು , ಬಹು
ಕೋಪಿಗಳಿದ್ದಲ್ಲಿ ಅನುಭವ ಗೋಷ್ಠಿಯ ಮಾಡಬಾರದು||
ಅಡಿಸತ್ತ ಮಡಕೆಗೆ ಜೋಡಿಸಿ ಒಲೆಗುಂಡ ಹೂಡಬಾರದು , ಅತಿ
ಬಡತನ ಬಂದಾಗ ನೆಂಟರ ಬಾಗಿಲ ಸೇರಬಾರದು||
ಹರಿಯ ಜರೆದು ಹರ ಘನನೆಂದು ನರಕಕ್ಕೆ ಸೇರಬಾರದು, ತಾ
ಪರರನ್ನು ಬೈದು ಪಾತಕಕೆ ಮುನ್ನೊಳಗಾಗಬಾರದು||
ಮಡದಿ ನುಡಿಯ ಕೇಳಿ ಜಗಳಕೊಬ್ಬರ ಕೂಡೆ ಹೋಗಬಾರದು, ಬಾ-
ಯ್ಬಡಕರು ಇದ್ದಲ್ಲಿ ವಸ್ತಿ ಬಿಡಾರವ ಮಾಡಬಾರದು||
ಮುಂದೆ ಭಲಾ ಎಂದು ಹಿಂದೆ ನಿಂದಿಪರನ್ನು ಕೂಡಬಾರದು , ಬಾಡ-
ದಾದಿಕೇಶವನ ಚರಣದ ಸ್ಮರಣೆಯ ಮರೆಯಬಾರದು||

++++++++++++++++++++++++++++++

diMbadalli iruva jIva
ಡಿಂಬದಲ್ಲಿ ಇರುವ ಜೀವ ಕಂಬಸೂತ್ರ ಗೊಂಬೆಯಂತೆ
ಎಂದಿಗಿದ್ದರೊಂದು ದಿನ ಸಾವು ತಪ್ಪದು ||pa||
ಹುಟ್ಟುತೇನು ತಾರಲಿಲ್ಲ ಸಾಯುತೇನು ಒಯ್ಯಲಿಲ್ಲ
ಸುಟ್ಟು ಸುಟ್ಟು ಸುಣ್ಣದ ಹರಳಾಯಿತೀ ದೇಹ|
ಹೊಟ್ಟೆ ಭಾಳ ಕೆಟ್ಟದೆಂದು ಎಷ್ಟು ಕಷ್ಟ ಪಟ್ಟರೂನು
ಬಿಟ್ಟು ಹೋಗುವಾಗ ಗೇಣು ಬಟ್ಟೆ ಕಾಣದು||1||
ಹತ್ತು ಎಂಟು ಲಕ್ಷ ಗಳಿಸಿ ಮತ್ತೆ ಸಾಲದೆಂದು ಪರರ
ಅರ್ಥಕಾಗಿ ಆಸೆಪಟ್ಟು ಸುಳ್ಳು ನ್ಯಾಯ ಮಾಡ್ವರು
ಬಿತ್ತಿ ಬೆಳೆದು ತನ್ನದೆಂಬ ವ್ಯರ್ಥಚಿಂತೆಯನ್ನು ಮಾಡೆ
ಸತ್ತು ಹೋದ ಮೇಲೆ ಅರ್ಥ ಯಾರಿಗಾಹುದೊ ||2||
ಹೊನ್ನು ಹೆಣ್ಣು ಮಣ್ಣು ಮೂರು ತನ್ನಲಿದ್ದು ಉಣ್ಣಲಿಲ್ಲ
ಅಣ್ಣತಮ್ಮ ತಾಯಿ ತಂದೆ ಬಯಸಲಾಗದು
ಅನ್ನ ವಸ್ತ್ರ ಭೋಗಕಾಗಿ ತನ್ನ ಸುಖವ ಕಾಣಲಿಲ್ಲ
ಮಣ್ಣುಪಾಲು ಆದಮೇಲೆ ಯಾರಿಗಾಹುದೊ ||3||
ಬೆಳ್ಳಿ ಬಂಗರಿಟ್ಟುಕೊಂಡು ಒಳ್ಳೆ ವಸ್ತ್ರ ಹೊದ್ದುಕೊಂಡು
ಅಳ್ಳಾಚಾರಿ ಗೊಂಬೆಯಂತೆ ಆಡಿ ಹೋಯಿತು|
ಹಳ್ಳ ಹರಿದು ಹೋಗುವಾಗ ಗುಳ್ಳೆ ಬಂದು ಒಡೆಯುವಂತೆ
ಉಳ್ಳೆ ಪೊರೆಯಂತೆ ಕಾಣೊ ಸಂಸಾರದಾಟವು ||4||
ವಾರ್ತೆ ಕೀರ್ತಿಯೆಂಬುವೆರಡು ಸತ್ತ ಮೇಲೆ ಬಂದವಯ್ಯ
ವಸ್ತು ಪ್ರಾಣನಾಯಕನು ಎಲ್ಲಿ ದೊರಕ್ಯಾನು
ಕರ್ತೃ ಕಾಗಿನೆಲೆಯಾದಿಕೇಶವನ ಚರಣಕಮಲ
ನಿತ್ಯದಲ್ಲಿ ಭಜಿಸಿ ಸುಖಿಯಾಗಿ ಬಾಳೆಲೊ ||5||

+++++++++++++++++++++++++++++

halavu jeevanava nungitu
ಹಲವು ಜೀವನವ ಒಂದೆಲೆ ನುಂಗಿತು ||
ಕಾಗಿ ನೆಲೆಯಾದಿ ಕೇಶವನು ಬಲ್ಲನೀ ಬೆಡಗ|| ಪ ||
ಹರಿಯ ನುಂಗಿತು ಹರ ಬ್ರಹ್ಮರ ನುಂಗಿತು
ಸುರರಿಗುಂಟಾದ ದೇವರ ನುಂಗಿತು
ಉರಿಗಣ್ಣಶಿವನ ಒಂದೆಲೆ ನುಂಗಿತೋ ದೇವ
ಹರಿಯ ಬಳಗವ ಒಂದೆಲೆ ನುಂಗಿತು|| 1 ||
ಎಂಟುಗಜವನು ನುಂಗಿ ಕಂಟಕರೈವರ ನುಂಗಿ
ಉಂಟಾದ ಗಿರಿಯ ತಲೆಯ ನುಂಗಿತು
ಕಂಟವ ಪಿಡಿದ ಬ್ರಹ್ಮನ ನುಂಗಿತೆಲೊ ದೇವ
ಎಂಟಾರು ಲೋಕ ಒಂದೆಲೆ ನುಂಗಿತು|| 2 ||
ಗಿಡವ ನುಂಗಿತು ಗಿಡದೊಳತೊಟ್ಟ ನುಂಗಿತು
ಗಿಡದ ತಾಯಿ ತಂದೆಯ ನುಂಗಿತು
ಬೆಡಗ ಬಲ್ಲರೆ ಪೇಳಿ ಬಾಡ ಕನಕದಾಸ
ನೊಡೆಯಾದಿಕೇಶವನ ಬಲ್ಲನೀ ಬೆಡಗ|| 3 ||

++++++++++++++++++++++++++++++++

nammamma shaarade
ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ
ನಿಮ್ಮೊಳಗಿಹನ್ಯಾರಮ್ಮ || ಪ ||
ಕಮ್ಮಗೋಲನ ವೈರಿಸುತನಾದ ಸೊಂಡಿಲ
ಹೆಮ್ಮೆಯ ಗಣನಾಥನೆ ಅಮ್ಮಯ್ಯ ||ಅ. ಪ||
ಮೋರೆ ಕಪ್ಪಿನ ಭಾವ ಮೊರದಗಲ ಕಿವಿ
ಕೋರೆ ದಾಡೆಯವನ್ಯಾರಮ್ಮ
ಮೂರು ಕಣ್ಣನ ಸುತ ಮುರಿದಿಟ್ಟ ಚಂದ್ರನ
ಧೀರ ತಾ ಗಣನಾಥನೆ ಅಮ್ಮಯ್ಯ ||1||
ಉಟ್ಟ ದಟ್ಟಿಯು ಮತ್ತೆ ಬಿಗಿದುಟ್ಟ ಚಲ್ಲಣದ
ದಿಟ್ಟ ತಾನಿವನ್ಯಾರಮ್ಮ
ಪಟ್ಟದ ರಾಣಿ ಪಾರ್ವತಿಯ ಕುಮಾರ
ಹೊಟ್ಟೆಯ ಗಣನಾಥನೆ ಅಮ್ಮಯ್ಯ||2||
ರಾಶಿ ವಿದ್ಯೆಯ ಬಲ್ಲ ರಮಣಿ ಹಂಬಲನೊಲ್ಲ
ಭಾಷಿಗನಿವನ್ಯಾರಮ್ಮ
ಲೇಸಾಗಿ ಸುಜನರ ಸಲಹುವ ನೆಲೆಯಾದಿ
ಕೇಶವನ ದಾಸ ಕಾಣೆ ಅಮ್ಮಯ್ಯ ||3||

 

+++++++++++++++++++++++++++++++++

Sumadhwa Seva © 2022