Ramayana ರಾಮಾಯಣ
*ರಾಮಚಂದ್ರ ಮಾಡಿದ ಶಂಭೂಕ ವಧೆ”
ರಾಮಾಯಣದಲ್ಲಿ (ವಾಲ್ಮೀಕಿ ರಾಮಾಯಣ ಉತ್ತರಕಾಂಡ ಅಧ್ಯಾಯ ೭೩ – ೭೬) ಶ್ರೀ ರಾಮಚಂದ್ರನು ರುದ್ರಪದವಿಯನ್ನು ಹೊಂದಲು ತಪಸ್ಸು ಮಾಡುತ್ತಿದ್ದ ಶಂಬೂಕನೆಂಬ ಶೂದ್ರನನ್ನು ಸಂಹರಿಸಿದನು ಎಂದು ಉಲ್ಲೇಖಿಸಿದ್ದಾರೆ.
ಇದರ ಮೇಲಿನ ಆಕ್ಷೇಪ – ರಾಮ ಬ್ರಾಹ್ಮಣ ಪಕ್ಷಪಾತಿ
ಆದರೆ ಏಕೆ ರಾಮ ಅವನನ್ನು ಸಂಹರಿಸಿದ ಎಂಬುದನ್ನು ಸರಿಯಾಗಿ ತರ್ಕಿಸದೆ ರಾಮನ ಮೇಲೆ ಆಕ್ಷೇಪ ಮಾಡುವ ಒಂದೇ ಉದ್ದೇಶದಿಂದ ಆಕ್ಷೇಪಿಸಿದ್ದಾರೆ.
ಒಮ್ಮೆ ರಾಮಚಂದ್ರನ ಆಳ್ವಿಕೆಯ ಕಾಲದಲ್ಲಿ ಒಬ್ಬ ಬ್ರಾಹ್ಮಣ ಅಳುತ್ತಾ ಬಂದು ತನ್ನ ತೋಳಿನಲ್ಲಿ ಸತ್ತಿರುವ ತನ್ನ ಮಗನನ್ನು ಹೊತ್ತುಕೊಂಡು ಬಂದು ರಾಮನಿಗೆ ತೋರಿಸಿ, ರಾಮಚಂದ್ರನನ್ನು ಕೇಳುತ್ತಾನೆ – ರಾಜನಾದ ನಿನ್ನಿಂದಲೇ ಏನಾದರೂ ತಪ್ಪಾಗಿದೆಯಾ ? ಈ ಮಗು ಏನು ಪಾಪ ಕೃತ್ಯ ಮಾಡಿದೆ ? ಇಲ್ಲದಿದ್ದರೆ ಈ ಮಗು ಹೇಗೆ ಸಾಯುತ್ತಿತ್ತು? ಎಂದು.
ರಾಮಚಂದ್ರ ವಿಚಾರಣೆ ಮಾಡಿದಾಗ ನಾರದರು ಹೇಳುತ್ತಾರೆ ” ಒಬ್ಬ ಶೂದ್ರ ತಪಸ್ವಿ ದುರುದ್ದೇಶ ಪೂರ್ವಕವಾಗಿ ತಲೆಕೆಳಗಾಗಿ ನಿಂತು ತಪಸ್ಸು ಮಾಡುತ್ತಿದ್ದಾನೆ. ಆದ್ದರಿಂದ ಈ ಮಗು ಸತ್ತಿದೆ” ಎಂದು.
ರಾಮಚಂದ್ರ ದೇವರು ಅಲ್ಲಿ ಬಂದು ನೋಡಿದಾಗ ಆ ಶೂದ್ರ ತಪಸ್ವಿಯೇ ರಾಮನಿಗೆ ತನ್ನ ಉದ್ದೇಶವನ್ನು ವಿವರಿಸುತ್ತಾನೆ. – “ರಾಮ, ನಾನು ಶೂದ್ರ ಕುಟುಂಬದಲ್ಲಿ ಜನಿಸಿದವ. ನನ್ನ ಕಠಿಣ ಪರಿಶ್ರಮದಿಂದ ದೇವತೆಗಳನ್ನು ಮೆಚ್ಚಿಸಿ, ದೇವಲೋಕವನ್ನು ನನ್ನದಾಗಿ ಮಾಡಿಕೊಂಡು ಸಶರೀರಿಯಾಗಿ ಸ್ವರ್ಗವನ್ನು ಪ್ರವೇಶಿಸಬೇಕೆಂದು ಘೋರ ತಪಸ್ಸನ್ನು ಮಾಡುತ್ತಿದ್ದೇನೆ’ ಎನ್ನುತ್ತಾನೆ. ಆಗ ರಾಮ ಹೇಳುತ್ತಾನೆ – ಅಯ್ಯಾ ನಿನ್ನ ತಪಸ್ಸು, ಪರಿಶ್ರಮ ಒಳ್ಳೆಯದೇ ಆದರೂ, ಅದರ ಹಿಂದಿನ ಕಾರಣ ಅಸಾತ್ವಿಕವಾದದ್ದು’
ರಾಮ ಬೇಡವೆಂದರೂ ಅವನು ತಪಸ್ಸು ಮುಂದುವರಿಸಿದ್ದರಿಂದ, ಅವನ ದುರುದ್ದೇಶ ಇಂದ್ರ ಲೋಕ ಪ್ರಾಪ್ತಿ ಹಾನಿಕಾರಿಯಾದ್ದರಿಂದ ರಾಮನು ಅವನನ್ನು ಸಂಹರಿಸಿದನು.
ಅದರ ಹಿನ್ನೆಲೆ ಹೀಗಿದೆ : ಹಿಂದೆ ಜಂಘ ಎಂಬ ಅಸುರನು ಪಾರ್ವತಿಯ ವರಬಲದಿಂದ ಒಂದು ಕಲ್ಪ ಆಯಸ್ಸು ಹೊಂದಿ ಒಬ್ಬ ಶೂದ್ರನಾಗಿ ಜನಿಸಿದ್ದನು. ಜಗತ್ತಿನ ನಾಶವನ್ನು ಬಯಸಿ, ರುದ್ರಪದವಿಯನ್ನು ಹೊಂದಲೆಂದು ತಪಸ್ಸು ಆಚರಿಸುತ್ತಿದ್ದ ಆ ಶೂದ್ರ. ಅಜೇಯತ್ವ ವರವನ್ನು ಪಡೆದಿದ್ದ ಅವನನ್ನು ಬೇರೆ ಯಾರೂ ಸಂಹರಿಸಲು ಅಸಾಧ್ಯವಾಗಿದ್ದರಿಂದ ಪುರುಷೋತ್ತಮನಾದ ಶ್ರೀರಾಮಚಂದ್ರನೇ ಅವನನ್ನು ಸಂಹರಿಸಿದನು. ಇಲ್ಲಿ ರಾಮಚಂದ್ರ ಅವನನ್ನು ಕೊಂದದ್ದು ಶೂದ್ರ ನೆಂಬುದಕಲ್ಲ. ಅವನು ಅಸುರನಾಗಿದ್ದರಿಂದ. ಕಲ್ಪಾಯುಷ್ಯವನ್ನು ಪಡೆದು, ತಪಸ್ಸಿಗೆ ತೊಡಗಿದ್ದ. ಆ ತಪಸ್ಸಿನ ಉದ್ದೇಶ ಶಿವನಾಗಬೇಕೆಂದು. ಅಂದರೆ ವರವಿತ್ತ ಪಾರ್ವತೀದೇವಿಗೇ ಗಂಡನಾಗಬೇಕೆಂದು. ಅರ್ಥಾತ್ ತಾಯಿಗೇ ಗಂಡನಾಗಬೇಕೆಂದು. ಇಂತಹದೇ ನೀಚ ಉದ್ದೇಶದಿಂದ ಶಂಭೂಕ ತಪಗೈದಿದ್ದರಿಂದ ಒಬ್ಬ ಬ್ರಾಹ್ಮಣಪುತ್ರನೊಬ್ಬ ಮೃತಪಟ್ಟ. ಈ ದುರುದ್ದೇಶವನ್ನು ಪರಿಗಣಿಸದೆ ಸುಮ್ಮನೆ ರಾಮನನ್ನು ದೂರುವುದು ತರವಲ್ಲ. ಇಲ್ಲಿ ಮೊದಲನೆಯದಾಗಿ, ಶಂಭುಕ ಶೂದ್ರನೆಂಬ ಅಂಶ ಗಳಿಕೆಗೇ ಬರುವುದಿಲ್ಲ. ಅವನ ದುರಾಲೋಚನೆ ಅವನ ಸಾವಿಗೆ ಕಾರಣ.
ಹಾಗೆ ನೋಡಿದರೆ ರಾಮಚಂದ್ರನು ಎಲ್ಲೂ ಬ್ರಾಹ್ಮಣರಿಗೆ ಮಾತ್ರ ವರಪ್ರದನಾಗಿರಲಿಲ್ಲ. ಶಂಬುಕನ ‘ದೇಹದೊಂದಿಗೆ ಸ್ವರ್ಗ ಪ್ರವೇಶಿಸಬೇಕೆಂಬ’ ಬೇಡಿಕೆ ಧಾರ್ಮಿಕವಾಗಿ ಅಸಾಧುವಾದದ್ದು. ದೇವಲೋಕಕ್ಕೆ ನೇರ ಪ್ರವೇಶಿಸಲು ಸಾಧ್ಯವಿಲ್ಲವೆಂಬ ತಳಹದಿಯ ಮೇಲೆ ರಾಮ ಶಂಬುಕನ ತಪಸ್ಸನ್ನು ಹಾಗೂ ಜೀವನವನ್ನು ಕೊನೆಗೊಳಿಸುತ್ತಾನೆ ಮತ್ತು ಆ ಬಾಲಕನಿಗೂ ಮತ್ತೆ ಜೀವ ಬರುತ್ತದೆ
ರಾಮಚಂದ್ರ ಉದ್ಧಾರ ಮಾಡಿದ ಹಲವಾರು ಜನರು ಬ್ರಾಹ್ಮಣರಲ್ಲ ಎಂಬುದು ಇವರ ಗಣನೆಗೇ ಬಂದಿಲ್ಲ.
೧. ರಾಮನು ಉದ್ದರಿಸಿದ್ದ ಶಬರೀ ಒಬ್ಬ ಬೇಡತಿಯಾಗಿದ್ದಳು
೨. ನಿಷಾದ ಜಾತಿಯಲ್ಲಿ ಜನಿಸಿದ್ದ ಗುಹನನ್ನೂ ರಾಮಚಂದ್ರ ಅನುಗ್ರಹಿಸಿದ್ದ.
೩. ವಿಭೀಷಣ ರಾಕ್ಷಸ.
೪. ರಾಮನು ಅನುಗ್ರಹಿಸಿದ ಸುಗ್ರೀವ ಬ್ರಾಹ್ಮಣನಲ್ಲ ಅವನೊಬ್ಬ ಕಪಿ.
೫. ಜಟಾಯುವೆಂಬ ಪಕ್ಷಿಗೆ ಸದ್ಗತಿಯನ್ನಿತ್ತ
೬. ದೈತ್ಯನಾಗಿ ಅವತರಿಸಿದ್ದ ಕಬಂಧನ ಉದ್ಧಾರ.
೭. ಜಾಂಬುವಂತ ಕರಡಿಯಾಗಿದ್ದ.
೮. ಸಹಭೋಗ ಪಡೆದ ಹನುಮಂತ ಕಪಿಯಾಗಿದ್ದ
ಅದೇ ರೀತಿ ರಾಮ ಸಂಹಾರ ಮಾಡಿದ ರಾವಣ ಕುಂಭಕರ್ಣರು ಹುಟ್ಟಿನಿಂದ ಬ್ರಾಹ್ಮಣರು.
ಇವುಗಳನ್ನೆಲ್ಲ ನೋಡಿದಾಗ, ಶ್ರೀ ರಾಮಚಂದ್ರನಿಗೆ ಯಾವುದೇ ಧರ್ಮದ ಮೇಲೆ ಹೆಚ್ಚು ಅಥವಾ ಕಡಿಮೆ ಪ್ರೀತಿ ಇದೆಯೆಂದು ಹೇಳಲಾಗದು. ಆದರೆ ರಾಮನು ಸರ್ವ ಧರ್ಮವನ್ನೂ ಗೌರವಿಸುತ್ತಿದ್ದನೆಂಬುದನ್ನು ಯಾರೂ ಅಲ್ಲಗಳೆಯಲಾಗದು.
*ರಾಮಾಯಣ ಬಾಲಕಾಂಡ*
ಭಾಗ ೧
ರಾಮಾಯಣ ತ್ರೇತಾಯುಗದಲ್ಲಿ ನಡೆದ ದುಷ್ಟ ರಾವಣ ಕುಂಭಕರ್ಣರ ಸಂಹಾರ ಋಷಿಮುನಿಗಳ ಸಂರಕ್ಷಣೆಯನ್ನು, ರಾಮಚಂದ್ರ ರಾಜ್ಯವಾಳಿದ ಕಥೆಯನ್ನು ಹೇಳುತ್ತದೆ.
ವಾಲ್ಮೀಕಿ ರಾಮಾಯಣವನ್ನು ರಾಮನ ಜನ್ಮದಿಂದ ಹಿಡಿದು ಅವನ ಅವತಾರ ಸಮಾಪ್ತಿಯವರೆಗಿನ ಜೀವನವನ್ನು ಸಾಮಾನ್ಯವಾಗಿ ಏಳುಕಾಂಡಗಳಾಗಿ ವಿಭಜಿಸಲಾಗುತ್ತದೆ .
ದಶರಥನ ಪುತ್ರಕಾಮೇಷ್ಟಿಯಾಗ, ರಾಮಲಕ್ಷ್ಮಣ ಭರತ ಶತ್ರುಘ್ನರ ಜನನ,ಬಾಲ್ಯ,ವಿಶ್ವಾಮಿತ್ರನ ಕೋರಿಕೆಯಂತೆ ರಾಕ್ಷಸರನ್ನು ಸಂಹರಿಸಲು ರಾಮ ಲಕ್ಷ್ಮಣರು ಅರಣ್ಯಕ್ಕೆ ತೆರಳುವುದು, ತಾಟಕೀ ಸಂಹಾರ, ಸೀತಾ ಸ್ವಯಂವರ- ಈ ಘಟನೆಗಳನ್ನು ಇದು ಒಳಗೊಂಡಿದೆ.
*ರಾವಣ ಕುಂಭಕರ್ಣರು* – ವಿಶ್ರವಸ್ ಮತ್ತು ಕೈಕಸಿಯರ ಮಕ್ಕಳು. ವಿಶ್ರವಸ್ ಮುನಿ ಬ್ರಹ್ಮದೇವರ ಮಾನಸ ಪುತ್ರರಾದ ಪುಲಸ್ತ್ಯರ ಮಗ. ಕೈಕಸಿ ರಾಕ್ಷಸಕುಲದ ಸುಮಾಲಿಯ ಮಗಳು. ಒಮ್ಮೆ ರಾಕ್ಷಸ ಸುಮಾಲಿ ಕೈಕಸಿಯನ್ನು ರಥದಲ್ಲಿ ಕುಳ್ಳಿರಿಸಿಕೊಂಡು ವಿಶ್ರವಸ್ ಮಹರ್ಷಿಯ ಆಶ್ರಮಕ್ಕೆ ಕರೆತಂದು ಆತನೇ ಅವಳ ಪತಿಯೆಂದೂ ಆತನ ಶುಶ್ರೂಷೆಯಲ್ಲಿ ನಿರತಳಾಗಿರಬೇಕೆಂದೂ ವಿಧಿಸಿ ಅವಳನ್ನು ಅಲ್ಲಿ ಬಿಟ್ಟುಹೋದ. ತಂದೆಯ ಆದೇಶದಂತೆ ಆಕೆ ಋಷಿಯ ಶುಶ್ರೂಷೆ ಮಾಡುತ್ತಿರಲು ಒಂದು ದಿನ ಬಹಿರ್ಮುಖನಾದ ಋಷಿ ಅವಳನ್ನು ಪ್ರಶ್ನಿಸಲಾಗಿ ಆಕೆ ತನ್ನ ಉದ್ದೇಶವನ್ನಾತನಿಗೆ ತಿಳಿಸಿದಳು. ಸಂಧ್ಯಾ ಸಮಯದಲ್ಲಿ ಪುತ್ರಸಂತಾನವನ್ನು ಬಯಸಿದ್ದರಿಂದ ಆಕೆಯ ಹೊಟ್ಟೆಯಲ್ಲಿ ಹುಟ್ಟುವರೆಲ್ಲರೂ ರಾಕ್ಷಸರಾಗುವರು ಎಂದು ಆ ಮಹರ್ಷಿ ನುಡಿದ. ಅಂತೆಯೇ ರಾವಣ, ಕುಂಭಕರ್ಣ, ವಿಭೀಷಣ ಶೂರ್ಪನಖಿಯರು ಜನಿಸಿದರು.
ರಾವಣನ ಮಲ ಸಹೋದರ ಕುಬೇರ. ವಿಶ್ರವಸ್ ಮತ್ತು ಇಲವಿದಾ ಅವರ ಪುತ್ರ. ಕುಬೇರನ ಪತ್ನಿ ಭದ್ರ. ಕುಬೇರನಿಗೆ ನಾಲ್ಕು ಮಕ್ಕಳು – ನಲಕುವರ, ಮಣಿಗ್ರೀವ, ಮಯೂರಜ ಹಾಗೂ ಮೀನಾಕ್ಷಿ ಅವರ ಹೆಸರು. ಲಂಕಾ ಒಡೆಯ ಕುಬೇರನೇ ಆಗಿದ್ದ. ಆದರೆ ಅವನಿಂದ ಬಲವಂತವಾಗಿ ರಾಜ್ಯವನ್ನು ಕಿತ್ತುಕೊಂಡು ವಿಶ್ವಕರ್ಮ ನಿರ್ಮಿತ ಲಂಕಾಪುರದರಸನಾಗಿದ್ದ ರಾವಣ. ಕುಬೇರನ ವಶದಲ್ಲಿದ್ದ ಪುಷ್ಪಕವಿಮಾನ ವನ್ನೂ ತಾನು ಅಪಹರಿಸಿದ್ದ.
ಜಗತ್ತಿನ ಯಾವುದೇ ಹೆಣ್ಣು ತನ್ನ ವಶವಾಗಬೇಕೆಂಬಾಸೆ ಅವನಿಗಿತ್ತು. ರಾವಣನ ಮಡದಿ ಮಂಡೋದರಿ ದೈತ್ಯ ಶಿಲ್ಪಿ ಮಯಾಸುರನ ಮಗಳು. ಅವಳಿಂದ ಪಡೆದ ಮಕ್ಕಳು – ಮೇಘನಾಥ (ಇಂದ್ರಜಿತ್) ಮತ್ತು ಅಕ್ಷಯಕುಮಾರ. ರಾವಣನ ಇನ್ನೊಬ್ಬ ಮಡದಿ ದಮ್ಯುಮಾಲಿನಿಯ ಪುತ್ರರು – ಅತಿಕ್ಯ ಮತ್ತು ತ್ರಿಶಿರ. ರಾವಣನ ಇನ್ನೊಬ್ಬ ಮಡದಿಯಲ್ಲಿ ಜನಿಸಿದವರು – ಪ್ರಹಸ್ಥಾ, ನರಾಂತಕ.
ಸೃಷ್ಟಿಕರ್ತನಾದ ಬ್ರಹ್ಮನು ರಾಕ್ಷಸರ ರಾಜ ರಾವಣನ ಘೋರ ತಪಸ್ಸಿಗೆ ಮೆಚ್ಚಿ ಅವನನ್ನು ದೇವತೆಗಳು, ರಾಕ್ಷಸರು ಅಥವಾ ಯಕ್ಷಕಿನ್ನರರು ಯಾರೂ ಕೊಲ್ಲಲಾಗದೆಂಬ ವರವನ್ನು ಕೊಟ್ಟಿದ್ದನು. ಅಂಥ ವರವನ್ನು ಪಡೆದು ಉನ್ಮತ್ಥ ರಾವಣನು ತನ್ನ ಸಹಚರ ರಾಕ್ಷಸರೊಡಗೂಡಿ ಭೂಸಂಹಾರಕ್ಕೆ ತೊಡಗಿ, ಶಿಷ್ಟಜನರಿಗೆ ಅದರಲ್ಲೂ ಬ್ರಾಹ್ಮಣರಿಗೆ ಅವರ ಜಪ-ತಪಗಳಿಗೆ ಉಪದ್ರವ ಕೊಡಲಾರಂಭಿಸಿದನು.
ಇದನ್ನು ನೋಡಿ ಎಲ್ಲ ದೇವತೆಗಳು ಭೂಮಿಯನ್ನೂ ತಮ್ಮನ್ನು ಈ ದುಷ್ಟನಿಂದ ಕಾಪಾಡು ಎಂದು ಬ್ರಹ್ಮನ ಮೊರೆ ಹೊಕ್ಕರು. ಬ್ರಹ್ಮನು ವಿಷ್ಣುವಿನ ಬಳಿ ಬಂದು ದೇವತೆಗಳ ಚಿಂತೆಯನ್ನು ಅರುಹಿ, ರಾವಣನು ಮನುಷ್ಯರಿಂದ ಅಥವಾ ಪ್ರಾಣಿಗಳಿಂದ ಮರಣ ಹೊಂದದ ವರವನ್ನು ಪಡೆದಿಲ್ಲದಿರುವುದರಿಂದ ವಿಷ್ಣುವೇ ಮಾನವನಾಗಿ ಅವತಾರವೆತ್ತಿ ರಾವಣನನ್ನು ಸಂಹರಿಸಬೇಕೆಂದು ಕೇಳಿಕೊಂಡನು.
*ಅಯೋಧ್ಯೆಯ ರಾಜ ದಶರಥ*
ಸರಯೂ ನದೀ ತೀರದಲ್ಲಿ ಕೋಸಲ ದೇಶದ ರಾಜ ಸೂರ್ಯ ವಂಶದ ದಶರಥ ಮಹಾರಾಜ ಆಳುತ್ತಿದ್ದ ಅಯೋಧ್ಯೆ ಯನ್ನು ತನ್ನ ರಾಜಧಾನಿಯಾಗಿ ಹೊಂದಿದ್ದ. ಅಯೋಧ್ಯಾ ನಗರಿಯು ಇಂದ್ರನ ಅಮರಾವತಿಯನ್ನು ನಾಚಿಸುವಂತಿತ್ತು.
ರಾಜ ದಶರಥನಿಗೆ ತನ್ನ ಮೂರೂ ರಾಣಿಯರಲ್ಲಿ – ಕೌಸಲ್ಯೆ, ಸುಮಿತ್ರೆ ಮತ್ತು ಕೈಕೇಯಿಯರಲ್ಲಿ – ಗಂಡು ಮಕ್ಕಳಿಲ್ಲದ್ದರಿಂದ ತನ್ನ ಉತ್ತರಾಧಿಕಾರಿಯ ಬಗ್ಗೆ ಚಿಂತೆಯಲ್ಲಿದ್ದನು. ಮಂತ್ರಿಗಳು ಹಾಗೂ ಪುರೋಹಿತರಾದ ವಸಿಷ್ಠರ ಸಲಹೆಯ ಮೇರೆಗೆ ಪುತ್ರಸಂತಾನಕ್ಕಾಗಿ ಪುತ್ರಕಾಮೇಷ್ಟಿ ಯಜ್ಞವನ್ನು ಋಷ್ಯಶೃಂಗ ಮುನಿಗಳಿಂದ ಮಾಡಿಸಿದನು ( ಇವರು ದಶರಥನ ಮಗಳು ಶಾಂತಾಳ ಪತಿ).
ಯಜ್ಞ ಯಶಸ್ವಿಯಾಗಿ ಪೂರ್ಣಗೊಂಡ ನಂತರ, ಅಗ್ನಿದೇವನು ಪ್ರತ್ಯಕ್ಷನಾಗಿ ದಶರಥನಿಗೆ ಯಜ್ಞದ ಪ್ರಸಾದವನ್ನು ನೀಡಲು, ರಾಜನು ಆ ಪಾಯಸದ ಅರ್ಧಭಾಗವನ್ನು ಮಹಾರಾಣಿ ಕೌಸಲ್ಯೆಗೂ ಉಳಿದರ್ಧ ಭಾಗವನ್ನು ಎರಡು ಪಾಲು ಮಾಡಿ ಒಂದನ್ನು ಸುಮಿತ್ರೆಗೂ ಉಳಿದ ಪಾಯಸವನ್ನು ಸಮಪಾಲು ಮಾಡಿ ಒಂದನ್ನು ಕೈಕೇಯಿಗೂ ಕೊನೆಯ ಭಾಗವನ್ನು ಪುನಃ ಸುಮಿತ್ರೆಗೂ ಪ್ರಾಶನ ಮಾಡಿಸಿದನು.
ಕಾಲ ಕ್ರಮೇಣ ಅವರು ಗರ್ಭಿಣಿಯರಾಗಿ ನಾಲ್ಕು ಮಕ್ಕಳಿಗೆ ಜನ್ಮವಿತ್ತರು. ಚೈತ್ರಮಾಸದ ಶುಕ್ಲಪಕ್ಷದ ನವಮಿಯಂದು ಪುನರ್ವಸು ನಕ್ಷತ್ರ ಕರ್ಕಾಟಕ ಲಗ್ನದಲ್ಲಿ ಶ್ರೀ ರಾಮಚಂದ್ರನು ರಾಣಿ ಕೌಸಲ್ಯೆಯ ಗರ್ಭವನ್ನು ನಿಮಿತ್ತ ಮಾಡಿಕೊಂಡು ಹಿರಿಯ ಮಗನಾಗಿ ಸಾಕ್ಷಾತ್ ಶ್ರೀ ಹರಿಯೇ ಅವತರಿಸಿದನು (ಪರಮಾತ್ಮನ ವಾಸುದೇವ ರೂಪ). ಕೈಕೇಯಿಯು ಪುಷ್ಯ ನಕ್ಷತ್ರ ಮೀನ ಲಗ್ನದಲ್ಲಿ ಭರತನಿಗೆ ಜನ್ಮವಿತ್ತಳು, ಸುಮಿತ್ರೆಯು ಆಶ್ಲೇಷಾ ನಕ್ಷತ್ರ ಕರ್ಕಾಟ ಲಗ್ನದಲ್ಲಿ ಸೂರ್ಯನು ಉಚ್ಛಸ್ಥಾನದಲ್ಲಿರಲು ಲಕ್ಷ್ಮಣ ಶತ್ರುಘ್ನರೆಂಬ ಪುತ್ರರತ್ನಗಳಿಗೆ ಜನ್ಮವನ್ನಿತ್ತಳು. ಶ್ರೀ ಹರಿಯೇ ಸ್ವಯಂ ರಾಮನಾಗಿ ತನ್ನ ವಾಸುದೇವ ರೂಪದಿಂದ ಅವತರಿಸಿದರೆ, ಶೇಷ ದೇವರು ಲಕ್ಷ್ಮಣನಾಗಿಯೂ (ಪರಮಾತ್ಮನ ಸಂಕರ್ಷಣಾವೇಶ), ಕಾಮವು ಭರತನಾಗಿಯೂ (ಪರಮಾತ್ಮನ ಪ್ರದ್ಯುಮ್ನಾವೇಶ), ಅನಿರುದ್ಧನು ಶತ್ರುಘ್ನನಾಗಿ (ಪರಮಾತ್ಮನ ಅನಿರುದ್ಧಾವೇಶ) ಆವತರಿಸಿದರು.
ಈ ಬಾಲಕರು ವಸಿಷ್ಠರಿಂದ ಶಾಸ್ತ್ರಗಳನ್ನೂ, ಬಿಲ್ಲುವಿದ್ಯೆಯನ್ನೂ ಕಲಿಯುತ್ತ ಬೆಳೆದರು. ಒಂದು ದಿನ ವಿಶ್ವಾಮಿತ್ರರು ರಾಜ್ಯಕ್ಕೆ ಬಂದು ದಶರಥನಲ್ಲಿ ತಮ್ಮ ಯಜ್ಞ ಯಾಗಾದಿಗಳಿಗೆ ಭಂಗ ತರುತ್ತಿರುವ ರಾಕ್ಷಸರಿಂದ ತಮ್ಮನ್ನು ಕಾಪಾಡಲು ರಾಮನನ್ನು ಕಳಿಸಬೇಕೆಂದು ಕೋರಿದರು. ಒಲ್ಲದ ಮನ್ಸಸ್ಸಿನಿಂದ ವಿಶ್ವಾಮಿತ್ರರೊಡನೆ ರಾಮ ಲಕ್ಷ್ಮಣರನ್ನು ಕಳಿಸಿಕೊಡಲು ಅವನು ಒಪ್ಪಿದನು. ಈ ಸೋದರರು ತಮ್ಮ ಕರ್ತವ್ಯವನ್ನು ಪೂರೈಸಲು ವಿಶ್ವಾಮಿತ್ರನು ಸಂತೋಷಪಟ್ಟು ಅವರಿಗೆ ಅನೇಕ ದಿವ್ಯಾಸ್ತ್ರಗಳನ್ನು ಅನುಗ್ರಹಿಸಿದನು.
*ಶ್ರೀರಾಮಚಂದ್ರನ ಗುಣವಾಚನ ನಾರದರಿಂದ ಮತ್ತು ವಾಲ್ಮೀಕಿ ಋಷಿಗಳಿಂದ ರಾಮಾಯಣಕ್ಕೆ ಪೀಠಿಕೆ*
ವಾಲ್ಮೀಕಿ ಋಷಿಗಳು ನಾರದರನ್ನು ಕೇಳಿದರು. :
ಈ ಲೋಕದಲ್ಲಿ ಯಾವ ಪುರುಷನು ಗುಣವಂತನೂ, ವೀರನೂ, ಕೃತಜ್ಞನೂ, ಧರ್ಮಜ್ಞನೂ, ಸತ್ಯವಾದಿಯೂ, ಧೃಡಸಂಕಲ್ಪನೂ, ಪ್ರಾಣಿದಯ ವುಳ್ಳವನೂ, ಕ್ರೋಧರಹಿತನೂ, ಅಸೂಯೆರಹಿತನೂ ಆಗಿದ್ದಾನೆ. ಇವೆಲ್ಲವೂ ಉಳ್ಳ ಪುರುಷನು ಯಾರಿದ್ದಾನೆ ?
ಆಗ ನಾರದರು ಉತ್ತರಿಸುತ್ತಾರೆ – ನೀವು ಹೇಳಿದ ಅಷ್ಟೂ ಗುಣ ಒಬ್ಬನಲ್ಲೇ ಇರುವುದು ದುರ್ಲಭ. ಆದರೂ ಇಷ್ಟೆಲ್ಲಾ ಗುಣಗಳು ಹೊಂದಿರುವನೊಬ್ಬ ಇದ್ದಾನೆ, ಅವನೇ ಇಕ್ಷ್ವಾಕು ವಂಶದ ದಶರಥ ಪುತ್ರ ಶ್ರೀರಾಮಚಂದ್ರ.
ಅವನು ಮನೋಜಯವುಳ್ಳವನೂ, ಮಹಾ ಪರಾಕ್ರಮಿಯೂ, ಬುದ್ಧಿವಂತ, ಜಿತೇಂದ್ರಿಯನೂ, ನೀತಿವಂತ, ಶತ್ರುವಿನಾಶಕ, ಐಶ್ವರ್ಯಶಾಲಿ. ವಿಶಾಲ ಬಾಹು, ಶಂಖದಂತೆ ರೇಖಾತ್ರಯವಿರುವ ಕಂಠ, ಪುಷ್ಟವಾದ ಗಂಡಸ್ದಲಗಳು, ವಿಶಾಲವಾದ ಎದೆ, ಆಜಾನುಬಾಹು, ಸುಂದರವಾದ ಹಣೆ, ಗಂಭೀರ ನಡಿಗೆ, ಅಗಲವಾದ ವಕ್ಷಸ್ದಳ, ಶರಣಾಗತ ರಕ್ಷಕ, ಗಾಂಭೀರ್ಯದಲ್ಲಿ ಸಮುದ್ರದಂತೆ, ಧೈರ್ಯದಲ್ಲಿ ಹಿಮವಂತನಂತೆ, ಚಂದ್ರನಂತೆ ಆನಂದಕಾರಕ, ಕೋಪಪ್ರಕಟಿಸಿದರೆ ಕಾಲಾಗ್ನಿ, ತಾಳ್ಮೆಯಲ್ಲಿ ಭೂದೇವಿ, ದಾನದಲ್ಲಿ ಕುಬೇರ. ಹೀಗೆಂದು ಹೇಳಿ ಇಡೀ ರಾಮಾಯಣವನ್ನು ಸಂಕ್ಷಿಪ್ತವಾಗಿ ನಾರದರು ವಾಲ್ಮೀಕಿಗಳಿಗೆ ಹೇಳಿದರು.
ನಂತರ ವಾಯು ಮಾರ್ಗದಲ್ಲಿ ನಾರದರು ತೆರಳಲು, ವಾಲ್ಮೀಕಿಗಳು ತಮಸಾ ನದಿಯಲ್ಲಿ ಸ್ನಾನ ಮಾಡಲು ಹೊರಟರು. ಅಲ್ಲಿ ಪರಸ್ಪರ ಒಂದನ್ನೊಂದು ಹೊಂದಿಕೊಂಡು ಹಾರಾಡುತ್ತಿದ್ದ ಕ್ರೌಂಚ ಪಕ್ಷಿ ಜೋಡಿಯ ನೋಡಿದರು. ಆ ಸಮಯದಲ್ಲಿ ಒಬ್ಬ ಬೇಡನು ಗಂಡು ಪಕ್ಷಿಗೆ ಬಾಣ ಪ್ರಯೋಗಿಸಿ ಕೊಂದನು. ಆಗ ಹೆಣ್ಣು ಪಕ್ಷಿಯು ದೀನಸ್ವರದಿಂದ ಗೋಳಿಡುತ್ತಿತ್ತು. ವಾಲ್ಮೀಕಿ ಋಷಿಗಳಿಗೆ ಮರುಕವಾಯಿತು. ವ್ಯಾಧನು ಮೃಗಪಕ್ಷಿಗಳ ಕೊಲ್ಲುವುದು ಧರ್ಮವಾದರೂ ಕಾಮ ಭೋಗದಲ್ಲಿದ್ದಾಗ ಕೊಲ್ಲುವುದು ಅಧರ್ಮ. ಎಲೈ ವ್ಯಾಧನೇ ನೀನು ಜಾಸ್ತಿ ಕಾಲ ಬದುಕಬಾರದು.
ಆಗ ಅವರ ವದನದಿಂದ ಬಂದ ಶ್ಲೋಕವೇ :
*ಮಾ ನಿಷಾದ, ಪ್ರತಿಷ್ಠಾಂ ತ್ವಮಗಮ: ಶಾಶ್ವತೀಸ್ಸಮಾಃ* !
*ಯತ್ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮಂ* !
ಬೇಡನೇ, ಕಾಮಮೋಹಿತವಾದ ಈ ಕ್ರೌಂಚಪಕ್ಷಿಗಳ ಜೋಡಿಯಲ್ಲಿ ಒಂದನ್ನು ಕೊಂದ ನಿನಗೆ ಎಂದಿಗೂ ಶಾಂತಿ ಲಭಿಸಲಾರದು!”
ಆಗ ವಾಲ್ಮೀಕಿಗಳ ಅನುಗ್ರಹಕ್ಕಾಗೇ ಬಂದಂತಹ ಬ್ರಹ್ಮ ದೇವರು ಅವರನ್ನು ಆಶೀರ್ವದಿಸಿ, “ನೀನು ಹೇಳಿದ ಈ ವಾಕ್ಯ ಛಂದೋ ಬದ್ಧವಾಗಿದೆ. ನಿನ್ನ ಬಾಯಿಯಿಂದ ಈ ಮಾತು ಬರಲು ನನ್ನ ಇಚ್ಛೆಯೇ ಕಾರಣ. ನೀನು ನಾರದರಿಂದ ಕೇಳಿದ ರಾಮಾಯಣವನ್ನು ವಿಸ್ತರಿಸು. ರಾಮ ಲಕ್ಷ್ಮಣ ಸೀತೆಯರ ಸಂಪೂರ್ಣ ಚರಿತ್ರೆ ಅವರ ಏಕಾಂತದಲ್ಲಾಗಲಿ, ಬಹಿರಂಗದಲ್ಲಾಗಲೀ ನಡೆದ ಬಗೆಯಂತೇ ನಿನಗೆ ಗೋಚರಿಸಲಿ. ನೀನು ರಚಿಸುವ ಯಾವ ಮಾತೂ ಸುಳ್ಳಾಗದಿರಲಿ. ಈ ಪ್ರಪಂಚದಲ್ಲಿ ಎಲ್ಲಿಯವರೆಗೆ ಪರ್ವತಗಳಿರುವುದೋ ನದಿಗಳಿರುವುದೋ ಅಲ್ಲಿಯವರೆಗೂ ಪ್ರಚಾದಲ್ಲಿರುವುದು”. ಹೀಗೆಂದು ಹೇಳಿದ ಬ್ರಹ್ಮ ದೇವರು ಅಂತರ್ಧಾನರಾದರು
ಮುಂದುವರಿಯುವುದು…….